ADVERTISEMENT

ಅಕ್ರಮ ಕೇಬಲ್‌ಗೆ ಪಾಲಿಕೆ ಕತ್ತರಿ ಪ್ರಯೋಗ

ಒಎಫ್‌ಸಿ ತೆರವಿಗೆ ಸೆಲ್ಯುಲರ್‌ ಆಪರೇಟರ್ಸ್‌ ಆಫ್‌ ಇಂಡಿಯಾ ಸಂಘಟನೆಯಿಂದ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 20:38 IST
Last Updated 26 ಏಪ್ರಿಲ್ 2019, 20:38 IST
ನಗರದ ರಸ್ತೆ ಪಕ್ಕದ ಮರಗಳಿಗೂ ಒಎಫ್‌ಸಿ ತೋರಣ ಕಟ್ಟಲಾಗಿದ್ದು ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದೆ
ನಗರದ ರಸ್ತೆ ಪಕ್ಕದ ಮರಗಳಿಗೂ ಒಎಫ್‌ಸಿ ತೋರಣ ಕಟ್ಟಲಾಗಿದ್ದು ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದೆ   

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಅಳವಡಿಸಲಾದ ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ತೆರವುಗೊಳಿಸಲು ಬಿಬಿಎಂಪಿ ಕಾರ್ಯಾಚರಣೆ ಆರಂಭಿಸಿದ್ದು, ವೈಟ್‌ಫೀಲ್ಡ್ ಹಾಗೂ ಬೆಳ್ಳಂದೂರು ಪ್ರದೇಶಗಳಲ್ಲಿ ಅಕ್ರಮವಾಗಿ ಹಾಕಿದ್ದ ಕೇಬಲ್‌ಗಳನ್ನು ತೆಗೆದುಹಾಕಲಾಗಿದೆ.

ವಿದ್ಯುತ್‌ ಕಂಬಗಳು ಹಾಗೂ ಮರಗಳ ಮೇಲೆ ನೇತಾಡುತ್ತಿದ್ದ ಕೇಬಲ್‌ಗಳಿಂದ ರೋಸಿಹೋಗಿದ್ದ ಸಾರ್ವಜನಿಕರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ತಡವಾಗಿ ಎಚ್ಚೆತ್ತ ಅಧಿಕಾರಿಗಳು ಈಗ ಕೇಬಲ್‌ ತೆಗೆದುಹಾಕುವ ಆಂದೋಲನ ನಡೆಸುತ್ತಿದ್ದಾರೆ.

ಬೆಳ್ಳಂದೂರು, ಕಸವನಹಳ್ಳಿ, ಸರ್ಜಾಪುರ, ಹರಳೂರು ರಸ್ತೆ ಬದಿಯ ಕಂಬಗಳಿಗೆ ಕಟ್ಟಿ, ಎಳೆದಿದ್ದ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಿದ್ದಾರೆ. ಸುಮಾರು 20 ಕಿ.ಮೀ. ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಜೋತುಬಿದ್ದಿದ್ದ ಕೇಬಲ್‌ಗಳನ್ನು ಕಿತ್ತು ಹಾಕಿದ್ದಾರೆ.

ADVERTISEMENT

‘ಪ್ರಜಾವಾಣಿ’ಯ ‘ನಮ್ಮ ನಗರ ನಮ್ಮ ಧ್ವನಿ’ ಪುಟದಲ್ಲಿ ಕೇಬಲ್‌ ಸಮಸ್ಯೆ ಕುರಿತು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು.

ಆಪರೇಟರ್‌ಗಳ ಆಕ್ರೋಶ:

ಪಾಲಿಕೆ ಕ್ರಮಕ್ಕೆ ಅಂತರ್ಜಾಲ ಸೇವಾ ಸಂಸ್ಥೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಾಹಿತಿ ತಂತ್ರಜ್ಞಾನ ರಾಜಧಾನಿಯಲ್ಲಿ ಅಂತರ್ಜಾಲ ಸಂಪರ್ಕವೇ ಕಡಿದುಹೋಗುವ ಸಂಭವವಿದೆ ಎಂದು ಭೀತಿ ವ್ಯಕ್ತಪಡಿಸಿವೆ. ಪಾಲಿಕೆಯ ಈ ನಡೆಯಿಂದ ಟೆಲಿಕಾಂ ಉದ್ದಿಮೆದಾರರು ಹಾಗೂ ಗ್ರಾಹಕರು ಇಬ್ಬರೂ ಸಂಕಷ್ಟ ಅನುಭವಿಸಬೇಕಾಗಿದೆ ಎಂದು ಸೆಲ್ಯುಲರ್‌ ಆಪರೇಟರ್ಸ್‌ ಆಫ್‌ ಇಂಡಿಯಾ ಸಂಘಟನೆ (ಸಿಒಎಐ) ಆತಂಕ ತೋಡಿಕೊಂಡಿದೆ.

ನಗರದ ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್‌, ಮಾರತ್ತಹಳ್ಳಿ, ಬೆಳ್ಳಂದೂರು ಪ್ರದೇಶಗಳಲ್ಲಿ ಕೇಬಲ್‌ಗಳನ್ನು ಹೆಚ್ಚಾಗಿ ಕಡಿತ ಮಾಡಲಾಗಿದೆ. ಟೆಲಿಕಾಂ ಹಾಗೂ ಇಂಟರ್‌ನೆಟ್‌ ಸೇವಾ ಸಂಸ್ಥೆಗಳಿಗೆ ಯಾವುದೇ ಮುನ್ಸೂಚನೆಯನ್ನು ನೀಡಿಲ್ಲ. ಇದರಿಂದ ಜನದಟ್ಟಣೆ ಪ್ರದೇಶದಲ್ಲಿರುವ ಜನರಿಗೆ ಅಡಚಣೆಯಾಗಿದೆ ಎಂದು ಸಿಒಎಐ ಹೇಳಿಕೊಂಡಿದೆ.

ಎಲ್ಲ ಪ್ರದೇಶಗಳಲ್ಲಿ ಅನಿರ್ಬಂಧಿತ ಮತ್ತು ತಡೆರಹಿತ ಟೆಲಿಕಾಂ ಸೇವೆಗಳ ಅಗತ್ಯ ಇರುತ್ತದೆ. ಇಂತಹ ಕ್ರಮಗಳಿಂದನಗರದ ಸಂಪರ್ಕ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದೂ ಹೇಳಿದೆ.

ಟೆಲಿಕಾಂ ಉದ್ದಿಮೆಗಳು ರಾಜ್ಯದಲ್ಲಿ ಅಪಾರ ಪ್ರಮಾಣ ಬಂಡವಾಳ ಹೂಡಿವೆ. ಟೆಲಿಫೋನ್‌, ಮೊಬೈಲ್‌ ಹಾಗೂ ಇಂಟರ್‌ನೆಟ್‌ ಸಂಪರ್ಕಕ್ಕಾಗಿರಾಜ್ಯದಾದ್ಯಂತ34,700 ಟವರ್‌ಗಳನ್ನು ಸ್ಥಾಪಿಸಲಾಗಿದೆ. ಸಂಪರ್ಕ ಜಾಲ ನಿರ್ಮಾಣಕ್ಕಾಗಿಯೇ ₹14,500 ಕೋಟಿ ಬಂಡವಾಳ ಹೂಡಲಾಗಿದೆ. ರಾಜ್ಯದಲ್ಲಿ ವಾರ್ಷಿಕ ₹10,000 ಕೋಟಿ ವರಮಾನ ಇದರಿಂದ ಬರುತ್ತದೆ. ರಾಜ್ಯದ ಬೊಕ್ಕಸಕ್ಕೂ ₹1,700 ಕೋಟಿ ತೆರಿಗೆ ಹೋಗುತ್ತದೆ. ಬಿಬಿಎಂಪಿ ನಡೆಯಿಂದ ಡಿಜಿಟಲ್‌ ಆರ್ಥಿಕತೆಗೆ ಪೆಟ್ಟು ಬೀಳಲಿದೆ ಎಂದು ವಿವರಿಸಿದೆ.

ನೆಲದಡಿಯಲ್ಲಿ ಹಾಕಲಾಗಿರುವ ಕೇಬಲ್‌ಗಳನ್ನು ಪಾಲಿಕೆ ಅನಧಿಕೃತ ಎಂದು ಭಾವಿಸಿದೆ. ಆದರೆ, ಟೆಲಿಕಾಂ ಸಂಸ್ಥೆಗಳು ಅಗತ್ಯವಾಗಿ ಬೇಕಿದ್ದ ಅನುಮತಿಗಳನ್ನು ಪಡೆದೇ ಕೇಬಲ್‌ ಹಾಕಿವೆ. ಪಾಲಿಕೆ ಅನುಮತಿ ಇದ್ದರೂ ಪೂರೈಕೆದಾರರ ಮೇಲೆ ನಿರ್ಬಂಧ ಹೇರಿದೆ. ಪಾಲಿಕೆ, ಬೆಸ್ಕಾಂ, ಜಲಮಂಡಳಿ ತಮ್ಮ ಕಾಮಗಾರಿಗಳ ವೇಳೆ ನಾವು ಹಾಕಿರುವ ಕೇಬಲ್‌ಗಳನ್ನು ಕತ್ತರಿಸುತ್ತಾರೆ ಅಥವಾ ತೆರವು ಮಾಡುತ್ತಾರೆ. ಇದರಿಂದ ಡಿಜಿಟಲ್‌ ಬೆಂಗಳೂರು ಯೋಜನೆಗೆ ಹಿನ್ನಡೆಯಾಗಲಿದೆ ಎಂದು ಹೇಳಿದೆ.

‘ಯಾವುದೇ ಸೂಚನೆ ನೀಡದೇ ಕೇಬಲ್‌ಗಳನ್ನು ಕಡಿತ ಮಾಡಲಾಗಿದೆ.ಪಾಲಿಕೆಯ ಈ ನಡೆಯಿಂದ ನಮಗೆ ಬೇಸರವಾಗಿದೆ.ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಲು ನಿರ್ಧಾರ ಮಾಡಿದ್ದೇವೆ’ ಎಂದು ಸಿಒಎಐನ ಪ್ರಧಾನ ನಿರ್ದೇಶಕ ರಾಜನ್‌ ಎಸ್‌. ಮ್ಯಾಥ್ಯೂ ತಿಳಿಸಿದ್ದಾರೆ.

ಒಎಫ್‌ಸಿ ಸಂಬಂಧ ನಗರದಲ್ಲಿ ಯಾವುದೇ ಸಮಗ್ರ ನೀತಿ ಇಲ್ಲದ ಕಾರಣ ಈ ಸಮಸ್ಯೆಗಳು ಉದ್ಭವಿಸಿವೆ. ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನೀತಿಯನ್ನು ಜಾರಿ ಮಾಡಬೇಕು. ಆಗಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯ ಎಂದು ಹೇಳಿದ್ದಾರೆ.

ಸಾರ್ವಜನಿಕರಿಗೆ ಖುಷಿ:ಪಾಲಿಕೆ ಅಕ್ರಮ ಕೇಬಲ್‌ ತೆರವು ಮಾಡುತ್ತಿರುವುದಕ್ಕೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹರ್ಷ ವ್ಯಕ್ತಪಡಿಸಿವೆ. ‘ಪಾದಚಾರಿಗಳಿಗೆ ತೊಂದರೆ ಮಾಡದಂತೆ ಟೆಲಿಕಾಂ ಕಂಪನಿಗಳು ಕೇಬಲ್‌ ಜೋಡಣೆಯ ಸೌಕರ್ಯಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳಬೇಕು. ರಸ್ತೆಗಳನ್ನು ಅವೈಜ್ಞಾನಿಕವಾಗಿ ಅಗೆದು ಕೇಬಲ್‌ಗಳನ್ನು ಹಾಕಬಾರದು’ ಎಂದು ಬೆಳ್ಳಂದೂರು ಅಭಿವೃದ್ಧಿ ವೇದಿಕೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.