ADVERTISEMENT

ಸೈಬರ್ ವಂಚನೆ: ವಿದ್ಯಾರ್ಥಿಗಳಿಗೆ ‘ಜಾಗೃತಿ ಪಾಠ’

‘ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ, ನಮ್ಮ ಜೊತೆಗೆ ಕೈಜೋಡಿಸಿ...’ ಕಾರ್ಯಕ್ರಮ

ಆದಿತ್ಯ ಕೆ.ಎ
Published 29 ಡಿಸೆಂಬರ್ 2025, 18:49 IST
Last Updated 29 ಡಿಸೆಂಬರ್ 2025, 18:49 IST
ಒಗ್ಗಟ್ಟಾಗಿ ಸುರಕ್ಷಿತ ಬೆಂಗಳೂರನ್ನು ನಿರ್ಮಿಸೋಣ ಕಾರ್ಯಕ್ರಮದಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ
ಒಗ್ಗಟ್ಟಾಗಿ ಸುರಕ್ಷಿತ ಬೆಂಗಳೂರನ್ನು ನಿರ್ಮಿಸೋಣ ಕಾರ್ಯಕ್ರಮದಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ   

ಬೆಂಗಳೂರು: ಸೈಬರ್ ವಂಚಕರಿಗೆ ಹಣ ದೋಚಲು ಬೆಂಗಳೂರು ನೆಚ್ಚಿನ ನಗರ ಆಗಿದೆ. ಕೇರಳ, ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ನಗರಕ್ಕೆ ಡ್ರಗ್ಸ್ ಎಗ್ಗಿಲ್ಲದೇ ಪೂರೈಕೆ ಆಗುತ್ತಿದೆ. ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ತೆರಳುವ ಯುವತಿಯರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಆಗಾಗ್ಗೆ ನಗರದಲ್ಲಿ ವರದಿ ಆಗುತ್ತಿವೆ. ಅಪಘಾತದಿಂದ ಸಾವು, ನೋವು ಸಂಭವಿಸುತ್ತಿದ್ದು, ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ...

– ಈ ರೀತಿಯ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ವಿನೂತನ ಯೋಜನೆ ಜಾರಿಗೆ ತರಲಾಗಿದೆ.

‘ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ, ನಮ್ಮ ಜೊತೆಗೆ ಕೈಜೋಡಿಸಿ...’ ಘೋಷಣೆಯ ಅಡಿ ಮಹಿಳೆಯರ ಸುರಕ್ಷತೆ, ಮಾದಕ ವ್ಯಸನದ ನಿಯಂತ್ರಣ, ಸೈಬರ್ ಅಪರಾಧಗಳ ತಡೆ ಹಾಗೂ ಸಂಚಾರ ನಿರ್ವಹಣೆ ಕುರಿತು ಪೊಲೀಸರು ಅರಿವು ಮೂಡಿಸಲು ಆರಂಭಿಸಿದ್ದಾರೆ. 

ADVERTISEMENT

ಈ ಕಾರ್ಯಕ್ರಮದ ಭಾಗವಾಗಿ ಪೂರ್ವ, ಪಶ್ಚಿಮ, ಆಗ್ನೇಯ, ವಾಯವ್ಯ, ನೈರುತ್ಯ, ಎಲೆಕ್ಟ್ರಾನಿಕ್ ಸಿಟಿ, ಉತ್ತರ, ದಕ್ಷಿಣ, ಕೇಂದ್ರ, ಈಶಾನ್ಯ, ವೈಟ್‌ಫೀಲ್ಡ್‌ ಉಪ ವಿಭಾಗಗಳ ಶಾಲಾ– ಕಾಲೇಜುಗಳಿಗೆ ಆಯಾ ಠಾಣಾ ವಿಭಾಗದ ಪೊಲೀಸರು ತೆರಳಿ, ಜಾಗೃತಿ ಮೂಡಿಸುತ್ತಿದ್ದಾರೆ.

‘ಈ ಜಾಗೃತಿ ಕಾರ್ಯಕ್ರಮವು ನಿರಂತರವಾಗಿ ನಡೆಯಲಿದೆ. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದರಿಂದ ಅವರು ತಮ್ಮ ಪೋಷಕರಿಗೂ ತಿಳಿಸುತ್ತಾರೆ. ನಾಗರಿಕರಲ್ಲಿ ಅರಿವು ಮೂಡಿದರೆ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಆಗಲಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿ ಆಗಿದ್ದರು. ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್ ಹಾಗೂ ಪಿಎಸ್‌ಐ ಹಂತದ ಅಧಿಕಾರಿಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ವಿದ್ಯಾರ್ಥಿಗಳೂ ಅಷ್ಟೇ ಆಸ್ಥೆಯಿಂದ ಪಾಲ್ಗೊಂಡಿದ್ದರು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಎರಡನೇ ಹಂತದಲ್ಲಿ ಸಂಘಟನೆಗಳ ಸದಸ್ಯರು, ಆಟೊ–ಕ್ಯಾಬ್‌ ಚಾಲಕರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಗಾರ್ಮೆಂಟ್ಸ್‌ ಉದ್ಯೋಗಿಗಳಿಗೆ ಈ ಕಾರ್ಯಕ್ರಮ ರೂಪಿಸಲಾಗುವುದು’ ಎಂದು ನೋಡಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ವಂಚಿಸುವ ತಂತ್ರಗಾರಿಕೆ: ‘2025ರಲ್ಲಿ ಬೆಂಗಳೂರಿನಲ್ಲಿಯೇ 9,326 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಪತ್ತೆಯಾದ ಪ್ರಕರಣಗಳು 716 ಮಾತ್ರ. ₹1,543 ಕೋಟಿ ವಂಚನೆ ನಡೆದಿದೆ. ‘ಗೋಲ್ಡನ್‌ ಅವರ್‌’ನಲ್ಲಿ ಕರೆ ಮಾಡಿ, ದೂರು ನೀಡದಿರುವ ಕಾರಣಕ್ಕೆ ಹಣ ವಾಪಸ್‌ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ‘ಗೋಲ್ಡನ್‌ ಅವರ್’ ಎಂದರೆ ಏನು? ವಂಚಕರು ಏನೆಲ್ಲ ತಂತ್ರ ಬಳಸುತ್ತಿದ್ದಾರೆ ಎಂಬುದರ ಕುರಿತು ಮಾಹಿತಿ ನೀಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ. 

‘ಅರೆಕಾಲಿಕ ಉದ್ಯೋಗ, ನಕಲಿ ವೆಬ್‌ಲಿಂಕ್‌, ಒಎಲ್‌ಎಕ್ಸ್‌, ‘ಡಿಜಿಟಲ್‌ ಅರೆಸ್ಟ್’, ಒಟಿಪಿ ದುರುಪಯೋಗ, ತಮ್ಮ ಹೆಸರಿನಲ್ಲಿ ಬಂದಿರುವ ಕೊರಿಯರ್‌ನಲ್ಲಿ ಡ್ರಗ್ಸ್ ಇದೆ, ಹೂಡಿಕೆಯಿಂದ ಹೆಚ್ಚಿನ ಲಾಭಾಂಶ ಬರಲಿದೆ ಎಂಬ ಆಮಿಷ, ಅರೆನಗ್ನ ದೃಶ್ಯಗಳನ್ನು ಸೆರೆ ಹಿಡಿದು ಸೈಬರ್ ವಂಚಕರು ಹಣಕ್ಕೆ ಬೇಡಿಕೆ ಇಡುವುದು ಇತ್ಯಾದಿ ಮಾಡುತ್ತಿದ್ದಾರೆ. ಶಾಲಾ–ಕಾಲೇಜು ಹಂತದಲ್ಲೇ ಈ ಸಂಬಂಧ ಅರಿವು ಮೂಡಿಸಿದರೆ ಅಪರಾಧ ಕೃತ್ಯ ತಡೆಗಟ್ಟಲು ಸಾಧ್ಯ ಆಗಲಿದೆ ಎನ್ನುವ ಕಾರಣಕ್ಕೆ ಇಲಾಖೆ ಈ ಕಾರ್ಯಕ್ಕೆ ಮುಂದಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಆಗ್ನೇಯ ವಿಭಾಗದಲ್ಲಿ 59 ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿದ್ದೇವೆ. ಈ ವಿಭಾಗದಲ್ಲಿ 11 ಸಾವಿರ ವಿದ್ಯಾರ್ಥಿಗಳು ಭಾಗಿ ಆಗಿದ್ದರು. ಕರಪತ್ರಗಳನ್ನೂ ಹಂಚಿಕೆ ಮಾಡಲಾಗಿದೆ’ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದರು.

ಆಗ್ನೇಯ ವಿಭಾಗದ ಕಾಲೇಜೊಂದರಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಪಾಲ್ಗೊಂಡಿದ್ದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು 
ತಂತ್ರಜ್ಞಾನ ಅಳವಡಿಸಿಕೊಂಡು ಅಪರಾಧ ತಡೆಗಟ್ಟಲು ಕ್ರಮ ವಹಿಸಲಾಗಿದೆ. ಇಲಾಖೆಯ ಆ್ಯಪ್‌ ಸಹಾಯವಾಣಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ
ಸೀಮಾಂತ್‌ಕುಮಾರ್ ಸಿಂಗ್‌ ನಗರ ಪೊಲೀಸ್ ಕಮಿಷನರ್‌
ಮಹಿಳೆಯರು ಮಕ್ಕಳ ಸುರಕ್ಷತೆಗೆ ಸ್ಥಾಪಿಸಿರುವ ‘ರಾಣಿ ಚೆನ್ನಮ್ಮ ಪಡೆ’ಯಿಂದ ಸ್ವಯಂ ರಕ್ಷಣೆ ತಂತ್ರಗಳ ಬಗ್ಗೆ ತರಬೇತಿ ನೀಡಲಾಗಿದೆ. ಮಕ್ಕಳ ಪರವಾಗಿ ಇರುವಂತಹ ಕಾನೂನುಗಳ ಬಗ್ಗೆಯೂ ಅರಿವು ಮೂಡಿಸಲಾಗಿದೆ. ಲಭ್ಯವಿರುವ ಸಹಾಯವಾಣಿಗಳ ಬಗ್ಗೆಯೂ ತಿಳಿಸಿಕೊಡಲಾಗಿದೆ
ಸಾರಾ ಫಾತಿಮಾ ಡಿಸಿಪಿ ಆಗ್ನೇಯ ವಿಭಾಗ

ಅರಿವು ನೆರವು...

* ಸೇಫ್‌ ಕನೆಕ್ಟ್‌ .. ಸುರಕ್ಷತಾ ದ್ವೀಪ (ಸೇಫ್ಟಿ ಐಲ್ಯಾಂಡ್‌ – ಪ್ರಮುಖ ಜಂಕ್ಷನ್‌ಗಳಲ್ಲಿ ಸ್ಥಾಪಿಸಲಾಗಿದ್ದು ತೊಂದರೆಗೆ ಒಳಗಾದವರು ಬಟನ್‌ ಒತ್ತಿದರೆ ಪೊಲೀಸರ ನೆರವು ಸಿಗಲಿದೆ)

* ನೆರವು ಮಹಿಳಾ ಕೇಂದ್ರ–ಮಹಿಳೆಯರು ಮತ್ತು ಮಕ್ಕಳ ನೆರವಿಗೆ ‘ನಿರ್ಭಯಾ ಯೋಜನೆ’ ಅಡಿ ನಗರದಾದ್ಯಂತ 60 ನೆರವು ಕೇಂದ್ರ ಸ್ಥಾಪಿಸಲಾಗಿದೆ

* ಡ್ರಗ್ಸ್ ಫ್ರೀ ಆ್ಯಪ್‌ (ಈ ಆ್ಯಪ್‌ ಬಳಸಿ ಮಾದಕ ವಸ್ತುಗಳ ಮಾರಾಟ ಮಾಹಿತಿಯನ್ನು ಸಾರ್ವಜನಿಕರು ತಿಳಿಸಬಹುದು)

* ಕೆಎಸ್‌ಪಿ ಆ್ಯಪ್‌, ಸೈಬರ್ ವಂಚನೆ ಸಹಾಯವಾಣಿ (1930)

* ರಾಷ್ಟ್ರೀಯ ಮಾದಕ ವಸ್ತುಗಳ ಸಹಾಯವಾಣಿ (1933)

* ಮಾದಕ ವಸ್ತು ನಿಯಂತ್ರಣ ಸಹಾಯವಾಣಿ (1908)

* ರಾಷ್ಟ್ರೀಯ ಮಹಿಳಾ ಸಹಾಯವಾಣಿ (14490)

* ಮಕ್ಕಳ ಸಹಾಯವಾಣಿ (1098)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.