ADVERTISEMENT

ಕಿಡ್ನಿ ದಾನಿಗೆ ₹4 ಕೋಟಿಯ ಆಮಿಷ

ಪ್ರತಿಷ್ಠಿತ ಆಸ್ಪತ್ರೆಗಳ ಹೆಸರಿನಲ್ಲಿ ವೆಬ್‌ಸೈಟ್‌ ಸೃಷ್ಟಿಸಿ ಜಾಹೀರಾತು ಪ್ರಕಟಿಸುತ್ತಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 17:57 IST
Last Updated 25 ಏಪ್ರಿಲ್ 2022, 17:57 IST
ಮ್ಯಾಥ್ಯೂ
ಮ್ಯಾಥ್ಯೂ   

ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ಸೃಷ್ಟಿಸಿ, ಅವುಗಳ ಮೂಲಕ ಕಿಡ್ನಿ ದಾನ ಮಾಡುವವರಿಗೆ ₹4 ಕೋಟಿ ಮೊತ್ತ ನೀಡುವುದಾಗಿ ಜಾಹೀರಾತು ಪ್ರಕಟಿಸಿ ನಾಗರಿಕರನ್ನು ವಂಚಿಸುತ್ತಿದ್ದ ಮೂವರನ್ನು ಆಗ್ನೇಯ ವಿಭಾಗದ ಸೆನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮ್ಯಾಥ್ಯೂ, ಮಿಮಿ ಹಾಗೂ ಕೊಲೆನಿಸ್‌ ಬಂಧಿತರು. ಇವರು ಘಾನಾ ಮತ್ತು ನೈಜೀರಿಯಾದ ಪ್ರಜೆಗಳು. ವಿದ್ಯಾರ್ಥಿ ವೀಸಾ ಮೇಲೆ ನಗರಕ್ಕೆ ಬಂದಿದ್ದ ಇವರು ವೀಸಾ ಅವಧಿ ಮುಗಿದ ಮೇಲೂ ಇಲ್ಲಿ ನೆಲೆಸಿದ್ದರು. ಐಷಾರಾಮಿ ಬದುಕು ನಡೆಸುವುದಕ್ಕಾಗಿ ಸಾರ್ವಜನಿಕರನ್ನು ವಂಚಿಸುತ್ತಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಜಯನಗರದ ಸಾಗರ್‌ ಅಪೊಲೋ ಆಸ್ಪತ್ರೆಯ ವೆಬ್‌ಸೈಟ್‌ ಹ್ಯಾಕ್‌ ಮಾಡಿದ್ದ ಆರೋಪಿಗಳು, ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯೊಬ್ಬರಿಗೆ ಮೂತ್ರಪಿಂಡ ಕಸಿ ಮಾಡಬೇಕಿದೆ. ಕಿಡ್ನಿ ದಾನ ಮಾಡಲು ಯಾರಾದರೂ ಮುಂದೆ ಬಂದರೆ ಮುಂಗಡವಾಗಿ ₹2 ಕೋಟಿ ಹಾಗೂ ಕಿಡ್ನಿ ದಾನ ಮಾಡಿದ ನಂತರ ₹2 ಕೋಟಿ ನೀಡುವುದಾಗಿ ಜಾಹೀರಾತು ಪ್ರಕಟಿಸಿದ್ದರು. ಆಸಕ್ತರು ನಮ್ಮನ್ನು ಸಂಪರ್ಕಿಸಿ ಎಂದು ವಿವಿಧ ಮೊಬೈಲ್‌ ಸಂಖ್ಯೆಗಳನ್ನು ಅಲ್ಲಿ ಹಾಕಿದ್ದರು. ಇದನ್ನು ಗಮನಿಸಿದ್ದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು, ಎಚ್‌ಎಸ್‌ಆರ್‌ ಬಡಾವಣೆಯ ಸೆನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು’ ಎಂದು ಹೇಳಿದ್ದಾರೆ.

ADVERTISEMENT

‘ಕಿಡ್ನಿ ಕೊಳ್ಳುವವರು ಹಾಗೂ ಮಾರುವವರನ್ನೇ ಗುರಿಯಾಗಿಸಿಕೊಂಡು ಆರೋಪಿಗಳು ವಂಚನೆ ನಡೆಸುತ್ತಿದ್ದರು. ನೋಂದಣಿ ಹಾಗೂ ಇತರೆ ಶುಲ್ಕದ ನೆಪ ಹೇಳಿ ಹಣವನ್ನು ತಮ್ಮ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ವಾಟ್ಸಾಪ್‌ ಮೂಲಕವೇ ಎಲ್ಲ ವ್ಯವಹಾರ ನಡೆಸುತ್ತಿದ್ದರು. ಬ್ಯಾಪಿಸ್ಟ್‌, ಕಾವೇರಿ ಸೇರಿದಂತೆ ಇತರೆ ಆಸ್ಪತ್ರೆಗಳ ಹೆಸರಿನಲ್ಲೂ ನಕಲಿ ವೆಬ್‌ಸೈಟ್‌ ಸೃಷ್ಟಿಸಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

‘ಆರೋಪಿಗಳು ಅಮೃತಹಳ್ಳಿ ಠಾಣೆ ವ್ಯಾಪ್ತಿಯ ವಸತಿ ಸಮುಚ್ಚಯವೊಂದರಲ್ಲಿ ವಾಸವಿದ್ದರು. ಮೊಬೈಲ್‌ ಕರೆಗಳ ಆಧಾರದಲ್ಲಿ ಅವರಿರುವ ಜಾಗವನ್ನು ಪತ್ತೆಹಚ್ಚಿ ದಾಳಿ ನಡೆಸಲಾಗಿತ್ತು. ಆರೋಪಿಗಳಿಂದ ಹಲವರು ವಂಚನೆಗೆ ಒಳಗಾಗಿದ್ದಾರೆ. ಆದರೆ, ಯಾರೊಬ್ಬರೂ ಠಾಣೆಗೆ ಹೋಗಿ ದೂರು ದಾಖಲಿಸಿಲ್ಲ’ ಎಂದಿದ್ದಾರೆ.

‘ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ಗಳು, ಲ್ಯಾಪ್‌ಟಾಪ್‌ ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಿದ್ದೇವೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.