ADVERTISEMENT

ಜಾಲತಾಣ ಹ್ಯಾಕ್; ರಿಸ್ಯುಮೆ ಕದ್ದು ₹ 7 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಮೇ 2021, 19:24 IST
Last Updated 16 ಮೇ 2021, 19:24 IST

ಬೆಂಗಳೂರು: ಜಾಲತಾಣವೊಂದರಲ್ಲಿ ಅಪ್‌ಲೋಡ್ ಮಾಡಿದ್ದ ರಿಸ್ಯುಮೆ ಮಾಹಿತಿ ಕದ್ದು ಅಭ್ಯರ್ಥಿಯನ್ನು ಸಂಪರ್ಕಿಸಿದ್ದ ಸೈಬರ್ ವಂಚಕರು, ಕೆಲಸದ ಆಮಿಷವೊಡ್ಡಿ ಶುಲ್ಕದ ಹೆಸರಿನಲ್ಲಿ ₹ 7 ಲಕ್ಷ ಪಡೆದು ವಂಚಿಸಿದ್ದಾರೆ.

‘ಹೊಸಕೆರೆಹಳ್ಳಿಯ 26 ವರ್ಷದ ಯುವಕ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆ ಪೊಲೀಸರು ಹೇಳಿದರು.

‘ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಯುವಕ, ಜಾಲತಾಣವೊಂದರಲ್ಲಿ ರಿಸ್ಯುಮೆ ಅಪ್‌ಲೋಡ್ ಮಾಡಿದ್ದರು. ಅದೇ ಜಾಲತಾಣ ಹ್ಯಾಕ್ ಮಾಡಿ ರಿಸ್ಯುಮೆ ದತ್ತಾಂಶ ಕದ್ದಿದ್ದ ಆರೋಪಿಗಳು, ಅದರಲ್ಲಿರುವ ಮಾಹಿತಿ ಆಧರಿಸಿ ಯುವಕನ ಮೊಬೈಲ್‌ಗೆ ಕರೆ ಮಾಡಿದ್ದರು.’

ADVERTISEMENT

‘ಕಿಯಾ ಮೋಟಾರ್ಸ್‌ ಕಂಪನಿಯಲ್ಲಿ ಕೆಲಸ ಖಾಲಿ ಇದ್ದು, ನಿಮ್ಮ ಅರ್ಹತೆಗೆ ಹೊಂದುತ್ತದೆ. ನೀವು ಒಪ್ಪಿದರೆ ಕೆಲಸ ಕೊಡಿಸುತ್ತೇವೆ’ ಎಂದು ಆರೋಪಿಗಳು ಹೇಳಿದ್ದರು. ಅದಕ್ಕೆ ಯುವಕ ಒಪ್ಪಿದ್ದರು’ ಎಂದೂ ಹೇಳಿದರು.

‘ಕೆಲಸಕ್ಕೆ ಆಯ್ಕೆಯಾದರೆ ಲಕ್ಷಾಂತರ ರೂಪಾಯಿ ಸಂಬಳ ಹಾಗೂ ಸವಲತ್ತುಗಳು ಇವೆ. ಆದರೆ, ಕೆಲಸ ಸಿಗಲು ಕೆಲ ಷರತ್ತುಗಳನ್ನು ಪೂರೈಸಬೇಕು. ಅರ್ಜಿ, ಸಂದರ್ಶನ ಹಾಗೂ ಇತರೆ ಶುಲ್ಕಗಳನ್ನು ಪಾವತಿಸಬೇಕು’ ಎಂದೂ ಆರೋಪಿಗಳು ಹೇಳಿದ್ದರು. ಅದನ್ನು ನಂಬಿದ್ದ ಯುವಕ, ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 7 ಲಕ್ಷ ಜಮೆ ಮಾಡಿದ್ದರು. ಅದಾದ ನಂತರ ಯಾವುದೇ ಕೆಲಸ ಕೊಡಿಸದೇ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.