ADVERTISEMENT

‘ಕೈ’ಗೆ ಸಿಗದ ಸೈಬರ್‌ ಖದೀಮರ ‘ಕರಾಮತ್ತು’

ಟೆಕಿಗಳು, ವೈದ್ಯರು, ಪ್ರೊಫೆಸರ್‌ಗಳೇ ವಂಚನೆಗೊಳಗಾಗುವ ‘ಅಮಾಯಕರು’ l ಬ್ಯಾಂಕಿಂಗ್ ವ್ಯವಸ್ಥೆಯ ಸ್ವರೂಪ ಬದಲಾದಂತೆ ತಂತ್ರಗಾರಿಕೆಯೂ ಭಿನ್ನ

ರಾಜೇಶ್ ರೈ ಚಟ್ಲ
Published 23 ಫೆಬ್ರುವರಿ 2020, 19:56 IST
Last Updated 23 ಫೆಬ್ರುವರಿ 2020, 19:56 IST
ಸೈಬರ್ ಅಪರಾಧ
ಸೈಬರ್ ಅಪರಾಧ   

ಬೆಂಗಳೂರು: ಎಲ್ಲೋ ಕುಳಿತು ತಂತ್ರಜ್ಞಾನದ ನೆರವಿನಿಂದ ಇನ್ನೊಬ್ಬರ ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ಹಣ ದೋಚುವ ಆನ್‌ಲೈನ್‌ ಖದೀಮರು ಸೈಬರ್‌ ಕ್ರೈಂ ಪೊಲೀಸರಿಗೂ ಸವಾಲಾಗಿದ್ದಾರೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌, ವಾಲೆಟ್‌, ಪ್ರಿ ಪೇಯ್ಡ್ ಕಾರ್ಡ್, ಇಂಟರ್‌ನೆಟ್ ಬ್ಯಾಂಕಿಂಗ್‌, ಮೊಬೈಲ್ ಬ್ಯಾಂಕಿಂಗ್‌... ಹೀಗೆ ಬ್ಯಾಂಕಿಂಗ್ ಸ್ವರೂಪ ಬದಲಾದಂತೆ ಕನ್ನ ಹಾಕಲು ಈ ಕಳ್ಳರು ಬಳಸುವ ತಂತ್ರಗಾರಿಕೆಯೂ ಬದಲಾಗುತ್ತಿದೆ!

ಮಾಹಿತಿ ಕದಿಯಲು ಸೈಬರ್‌ ಖದೀಮರು ಹುಡುಕುವ ಹೊಸ, ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈ ‘ಅತಿ ಬುದ್ದಿವಂತ’ ಕಳ್ಳರಿಂದ ವಂಚನೆಗೆ ಒಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವವರಲ್ಲಿ ಬಹುತೇಕರು ಟೆಕಿಗಳು, ವೈದ್ಯರು, ಪ್ರೊಫೆಸರ್‌ಗಳು, ವಿದೇಶಗಳಲ್ಲಿ ಓದಿ ಡಬಲ್‌ ಪದವಿ ಪಡೆದವರು ಎನ್ನುವುದೂ ವಿಪರ್ಯಾಸ.

ಮೊಬೈಲ್‌ನಲ್ಲಿ ಮಾತನಾಡುತ್ತಲೇ ಮುಖ ಪರಿಚಯವೇ ಇಲ್ಲದವರ ಖಾತೆಗೆ ಕ್ಷಣಾರ್ಧದಲ್ಲಿ ಸಾವಿರಾರು ರೂಪಾಯಿಯನ್ನು ವರ್ಗಾಯಿಸಿ, ಬಳಿಕ ಪೆಚ್ಚುಮೋರೆ ಹಾಕಿಕೊಂಡು ಸೈಬರ್‌ ಠಾಣೆಗಳ ಕದ ತಟ್ಟುವವರ ಸಂಖ್ಯೆ ನಾಲ್ಕೈದು ವರ್ಷಗಳಿಂದೇಚಿಗೆ ಗಣನೀಯವಾಗಿ ಹೆಚ್ಚಿದೆ. ಈ ರೀತಿ ವಂಚನೆಗೊಳದಾದವರ ಯಾವುದೇ ಠಾಣೆಯಲ್ಲೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಿಸಬಹುದು ಎಂದು ಪೊಲೀಸ್‌ ಇಲಾಖೆಯೇ ಫರ್ಮಾನು ಹೊರಡಿಸಿರುವುದು ಇದೇ ಕಾರಣಕ್ಕೆ.

ADVERTISEMENT

ಆನ್‌ಲೈನ್‌ನಲ್ಲೇ ಖರೀದಿಸಿ, ಉದ್ಯೋಗ ಗಿಟ್ಟಿಸಿ ಕೋಟ್ಯಧೀಶರಾಗಿ, ಆನ್‌ಲೈನ್‌ನಲ್ಲೇ ಸಾಲ ಸೌಲಭ್ಯ, ವಧುವರರ ಅನ್ವೇಷಣೆ, ಮೊಬೈಲ್ ರಿಚಾರ್ಜ್, ಬೇಕಾದ ಪದವಿ- ಪಿಎಚ್‌ಡಿ, ಆನ್‌ಲೈನ್‌ನಲ್ಲಿ ಲಾಟರಿ... ಹೀಗೆ ವೈವಿಧ್ಯಮಯ ಆಮಿಷಗಳಿಗೆ ಮರುಳಾಗಿ ಮೋಸ ಹೋಗುತ್ತಿರುವ ವಿದ್ಯಾವಂತರು, ಬುದ್ಧಿವಂತರು ದಿನನಿತ್ಯ ಸೈಬರ್ ಪೊಲೀಸ್ ವಿಭಾಗಕ್ಕೆ ಬಂದು ದೂರು ನೀಡುತ್ತಿದ್ದಾರೆ.

ಅಂಕಿಅಂಶಗಳ ಪ್ರಕಾರ, 2019ರಲ್ಲಿ ದಾಖಲಾದ ದೂರುಗಳಲ್ಲಿ, ಅತಿಹೆಚ್ಚು ದೂರುಗಳು ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ಮತ್ತು ದಾಖಲೆ ಅಪ್‌ಡೇಟ್ ಮಾಡಿಕೊಳ್ಳುವ ಬಗ್ಗೆ ಬಂದಿರುವ ಮೊಬೈಲ್‌ ಕರೆ ನಂಬಿ ಮೋಸ ಹೋದವವರಿಗೆ ಸಂಬಂಧಿಸಿದ್ದು. ಯಾವುದೋ ಬ್ಯಾಂಕ್, ಸಂಸ್ಥೆಯ ಪ್ರತಿನಿಧಿ ಎಂದುಕೊಂಡು ವಂಚಕ ಕರೆ ಮಾಡುತ್ತಾನೆ. ಗ್ರಾಹಕ ಸೇವಾ ಅಧಿಕಾರಿ ಎಂದು ಪರಿಚಯಿಸಿಕೊಂಡು ನಯವಾಗಿ ಮಾತನಾಡಿ ಬಲೆಗೆ ಕೆಡವುತ್ತಾನೆ. ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಇತ್ಯಾದಿಯನ್ನು ಹೇಳಿ, ಪಡೆದುಕೊಂಡು ಮತ್ತಷ್ಟು ನಂಬಿಕೆ ಹುಟ್ಟಿಸುತ್ತಾನೆ. ಈ ಜಾಲಕ್ಕೆ ಬಿದ್ದರಂತೂ ಮುಗಿಯಿತೆಂದೇ ಅರ್ಥ. ವಂಚಕರು ‘ನಿಮ್ಮ ಕಾರ್ಡ್ ಬ್ಲಾಕ್ ಆಗಲಿದೆ, ಪೇಟಿಎಂ ಕೆಲಸ ಮಾಡುವುದು ನಿಲ್ಲಿಸಲಿದೆ ಎಂದೆಲ್ಲ ಹೇಳಿ ನಂಬಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೊಬೈಲ್‌ಗೆ ಬರುವ ಕೋಡ್ ಸಂಖ್ಯೆ ಪಡೆದುಕೊಂಡು, ಸ್ಮಾರ್ಟ್‌ ಫೋನ್‌ಗೇ ಕನ್ನ ಹಾಕುತ್ತಾರೆ.

ಅಪರಿಚಿತ ವ್ಯಕ್ತಿ, ಫೋನ್‌ ಕರೆ ಮಾಡಿ ಬ್ಯಾಂಕ್‌ನಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಳ್ಳುತ್ತಾನೆ. ‘ಬ್ಯಾಂಕ್‌ ಗ್ರಾಹಕರಿಗಾಗಿ ಹೊಸ ಡೆಬಿಟ್‌ ಕಾರ್ಡ್‌ ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಇನ್‌ಬಿಲ್ಟ್‌ ಜಿಪಿಎಸ್‌, ಬೆರಳಚ್ಚು ಇರುತ್ತದೆ. ಕಾರ್ಡ್‌ ಕಳೆದುಹೋದರೆ ಟ್ರ್ಯಾಕ್‌ ಮಾಡಬಹುದು ಎಂದು ಪುಸಲಾಯಿಸುತ್ತಾನೆ. ಅದನ್ನು ವ್ಯಕ್ತಿ ನಂಬಿದಾಗ, ಕಾರ್ಡ್‌ನ ಸಂಖ್ಯೆ ಏನೆಂದು ಕೇಳಿ ಖದೀಮ ಪಡೆದುಕೊಳ್ಳುತ್ತಾನೆ. ನಂತರ ಕಾರ್ಡ್‌ ಹಿಂಭಾಗದ ಸಿವಿವಿ, ಮೊಬೈಲ್‌ ನಂಬರ್‌ಗೆ ಬರುವ ಒಟಿಪಿ ಕೂಡ ತಿಳಿಸಿ ಎಂದು ಕೇಳುತ್ತಾನೆ. ಅಮಾಯಕ ವ್ಯಕ್ತಿ ನಂಬಿ ಒಟಿಪಿ ನೀಡುತ್ತಿದ್ದಂತೆ ಹಣ ಮಂಗಮಾಯವಾದ ಸಂದೇಶ ಮೊಬೈಲ್‌ಗೆ ಬರುತ್ತದೆ. ಅಲ್ಲಿಗೆ ಮೋಸ ಹೋದಂತೆಯೇ!

ವಂಚಕರು ಸಾಮಾನ್ಯರಲ್ಲ: ಪತ್ತೆ ಸುಲಭವಲ್ಲ

ಆನ್‌ಲೈನ್‌ ಜಾಲದಲ್ಲಿ ಸಕ್ರಿಯವಾಗಿರುವ ವಂಚಕರೂ ಸಾಮಾನ್ಯರಲ್ಲ. ಮಾತಿನಿಂದಲೇ ಮೋಡಿ ಮಾಡಿ ನಂಬಿಸಿ, ಭಾವನಾತ್ಮಕವಾಗಿ ಮೂರ್ಖರನ್ನಾಗಿಸುತ್ತಾರೆ. ಅದಕ್ಕೆ ಪೂರಕವಾಗಿ ವಂಚನೆಯ ಯೋಜನೆಯನ್ನೂ ಸಿದ್ಧಪಡಿಸಿಕೊಂಡಿರುತ್ತಾರೆ ಎನ್ನುತ್ತಾರೆ ಸೈಬರ್‌ ಪೊಲೀಸರು.

‘ಸೈಬರ್‌ ಖದೀಮರ ಜಾಡು ಹಿಡಿಯುವುದಾಗಲಿ, ಅವರಿಂದ ಹಣ ವಸೂಲಿ ಮಾಡುವುದಾಗಲಿ ಕಷ್ಟ’ ಎನ್ನುವುದು ಈ ಕ್ಷೇತ್ರದ ತಜ್ಞರ ಅಭಿಮತ. ಯಾವುದೊ ದೇಶದ ಯಾವುದೊ ಮೂಲೆಯಲ್ಲಿ ಕುಳಿತು ಈ ಖದೀಮರು ಕನ್ನ ಹಾಕುತ್ತಾರೆ. ಅವರು ನೀಡುವ ವಿಳಾಸ, ಮಾಹಿತಿಗಳೆಲ್ಲ ಸುಳ್ಳು. ಆದರೆ, ಅದನ್ನು ಪರೀಕ್ಷಿಸಿಕೊಳ್ಳುವ ದಾರಿಗಳು ಇಲ್ಲ. ಇದೇ ಅಸಹಾಯಕತೆಯನ್ನು ಸೈಬರ್ ಪೊಲೀಸರೂ ವ್ಯಕ್ತಪಡಿಸುತ್ತಾರೆ

ಹೊರ ದೇಶಗಳಿಗೆ ತೆರಳಿ ಈ ಕದೀಮರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲು ಅಂತರರಾಷ್ಟ್ರೀಯ ಕಾನೂನುಗಳಿಗೆ ಸಂಬಂಧಿಸಿ ಅನೇಕ ಅಡ್ಡಿಗಳಿವೆ. ವಂಚಿಸಿದ ವೆಬ್‌ಸೈಟ್‌ನ್ನು ಇಲ್ಲಿ ಬ್ಲಾಕ್ ಮಾಡಿಸಬಹುದು. ಆದರೆ, ಅವರು ಮತ್ತೊಂದು ಹೆಸರಲ್ಲಿ ಇನ್ನೊಂದು ವೆಬ್‌ಸೈಟ್ ತೆರೆದು ವಂಚನೆ ಮುಂದುವರಿಸುತ್ತಾರೆ. ಏಕಕಾಲಕ್ಕೆ ಹಲವು ಹೆಸರುಗಳಲ್ಲಿ ವಂಚನೆ ನಡೆಸುತ್ತಾರೆ. ವಂಚನೆಗೆ ಒಳಗಾದವರು ಬಂದು ದೂರು ಕೊಟ್ಟಾಗಲೇ ಈ ವಿಷಯ ಗೊತ್ತಾಗುತ್ತದೆ ಎನ್ನುತ್ತಾರೆ ಸೈಬರ್ ಕ್ರೈಂ ಪೊಲೀಸರು.

ಆನ್‌ಲೈನ್ ವಂಚನೆ: ಆರ್‌ಬಿಐ ಎಚ್ಚರಿಕೆ

ಆನ್‌ಲೈನ್ ವಹಿವಾಟು ಉತ್ತೇಜನಕ್ಕಾಗಿ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಎಲ್ಲ ಬ್ಯಾಂಕುಗಳಿಗೆ ಆರ್‌ಬಿಐ (ರಿಸರ್ವ್‌ ಬ್ಯಾಂಕ್) ಈ ಹಿಂದೆಯೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆನ್‌ಲೈನ್ ವ್ಯವಹಾರ ಮತ್ತು ವಂಚನೆಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವಂತೆಯೂ ತಿಳಿಸಿದೆ. ವಂಚನೆಗೆ ಒಳಗಾದ ಗ್ರಾಹಕರು ದೂರು ನೀಡಲು ಸಾಧ್ಯವಾಗುವಂತೆ ಸೇವಾ ವಿಭಾಗವನ್ನು ಬ್ಯಾಂಕಿನವರು ನಿರ್ವಹಿಸುತ್ತಿರಬೇಕು. ಆನ್‌ಲೈನ್‌ನಲ್ಲಿ ದೂರು ನೀಡಲು ಜಾಲತಾಣದಲ್ಲಿ ಲಿಂಕ್‌ ನಮೂದಿಸಿರಬೇಕು.

ಗ್ರಾಹಕನ ಪ್ರಮೇಯವಾಗಲಿ, ಬ್ಯಾಂಕ್‌ನವರ ನಿರ್ಲಕ್ಷ್ಯವಾಗಲಿ ಇಲ್ಲದೇ, ಮೂರನೇ ವ್ಯಕ್ತಿಯ (ಥರ್ಡ್ ಪಾರ್ಟಿ) ಹಸ್ತಕ್ಷೇಪದಿಂದ ವಂಚನೆ ನಡೆದಿದ್ದರೆ, ಮೂರು ಕೆಲಸದ ದಿನಗಳಲ್ಲಿ ದೂರು ನೀಡಬೇಕು. ವಂಚನೆಗೊಳಗಾದ ಗ್ರಾಹಕನಿಗೂ, ಅಕ್ರಮ ವಹಿವಾಟಿಗೂ ಯಾವುದೇ ಸಂಬಂಧವಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿ, ನ್ಯಾಯ ಪಡೆಯಲು ಅವಕಾಶವಿದೆ. ಆದರೆ, ಇಂಥ ವಹಿವಾಟುಗಳಲ್ಲಿ ಗ್ರಾಹಕರ ಲೋಪ ಇದೆ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಬ್ಯಾಂಕ್‌ನವರ ಹೆಗಲ ಮೇಲೆ ಇರುತ್ತದೆ. ಆನ್‌ಲೈನ್‌ ವಹಿವಾಟು ನಡೆಸುವುದಕ್ಕೆ ಅಗತ್ಯವಿರುವ ಮಾಹಿತಿಯನ್ನು ಯಾರ ಕೈಗೂ ಸಿಗದಂತೆ ಸುರಕ್ಷಿತವಾಗಿ ಇಟ್ಟುಕೊಳ್ಳುವ ಹೊಣೆ ಗ್ರಾಹಕರ ಮೇಲಿದೆ. ಗ್ರಾಹಕನ ನಿರ್ಲಕ್ಷ್ಯದಿಂದ ಮಾಹಿತಿ ಸೋರಿಕೆಯಾಗಿ, ಕನ್ನ ಹಾಕುವವರು ಖಾತೆಯಿಂದ ಹಣ ಲಪಟಯಿಸಿದರೆ, ಆ ನಷ್ಟವನ್ನು ಬ್ಯಾಂಕ್‌ಗಳು ಭರಿಸುವುದಿಲ್ಲ. ಗ್ರಾಹಕ ವಂಚನೆಗೆ ಒಳಗಾದ ತಕ್ಷಣ ದೂರು ನೀಡಬೇಕು. ದೂರು ನೀಡಿದ ನಂತರವೂ ಖಾತೆಯಿಂದ ಹಣ ಕಡಿತವಾದರೆ, ಅಂಥ ವಹಿವಾಟುಗಳಿಗೆ ಬ್ಯಾಂಕ್‌ನವರು ಜವಾಬ್ದಾರರಾಗಿರುತ್ತಾರೆ ಎನ್ನುವುದು ಆರ್‌ಬಿಐ ನಿರ್ದೇಶನ.

ಮೋಸ ಹೋಗುವುದನ್ನು ತಡೆಯಲು ‘ಎಚ್ಚರಿಕೆ’ಯೊಂದೇ ಪರಿಹಾರ

-ಬ್ಯಾಂಕ್ ಖಾತೆಯ ವಿವರ, ಸ್ಥಿರ ಮತ್ತು ದೂರವಾಣಿ ಸಂಖ್ಯೆ ಸೇರಿದಂತೆ ಹಣಕಾಸು ಮಾಹಿತಿಗಳನ್ನು ಅಪರಿಚಿತ ವ್ಯಕ್ತಿ ಅಥವಾ ಇ–ಮೇಲ್‌ಗಳ ಜತೆ ಹಂಚಿಕೊಳ್ಳಬೇಡಿ

- ಸಾಮಾಜಿಕ ತಾಣಗಳಲ್ಲಿ ಬ್ಯಾಂಕ್ ಖಾತೆ ಮತ್ತಿತರ ವಿವರಗಳನ್ನು ಹಂಚಿಕೊಳ್ಳಬೇಡಿ. ಯಾವುದೇ ಖಾತೆಗೆ, ಯಾವುದೇ ಕಾರಣಕ್ಕೂ ಮುಂಗಡವಾಗಿ ಹಣ ವರ್ಗಾಯಿಸಬೇಡಿ

- ಆನ್‌ಲೈನ್ ಖರೀದಿ ಮತ್ತು ಮಾರಾಟ ನಡೆಸುವ ಮೊದಲು ವ್ಯಕ್ತಿ ಅಥವಾ ಸಂಸ್ಥೆಯ ಸಂಪೂರ್ಣ ವಿವರ ಖಚಿತಪಡಿಸಿಕೊಳ್ಳಿ

-ಮುಖ ನೋಡದೆ, ಫೋಟೋಗಳನ್ನೇ ನಂಬಿ ಖಾಸಗಿ ಮಾಹಿತಿ ಮತ್ತು ಫೋಟೊಗಳನ್ನು ಶೇರ್ ಮಾಡಬೇಡಿ

-ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪಾಸ್‌ವರ್ಡ್‌ ಸುರಕ್ಷಿತವಾಗಿ ಇಟ್ಟುಕೊಳ್ಳಿ. ಪರೀಕ್ಷಿಸದ ಹೊರತು ಕಾರ್ಡ್ ವಿವರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬೇಡಿ

-ಲಾಟರಿ ಹೊಡೆದಿದೆ, ಬಹುಮಾನ ಬಂದಿದೆ, ಉಡುಗೊರೆ ಬಂದಿದೆ, ವಿದೇಶ ಪ್ರವಾಸದ ಬಂಪರ್ ಟಿಕೆಟ್ ಬಂದಿದೆ ಎಂದು ಪುಸಲಾಯಿಸುವ ಸಂದೇಶ ಮತ್ತು ಇ–ಮೇಲ್‌ ನಂಬಬೇಡಿ

ಅಪರಾಧ ಪತ್ತೆ ಶೇ 10ರಷ್ಟು ಮಾತ್ರ!

ಸೈಬರ್‌ ಅಪರಾಧ ಪತ್ತೆಗೆಂದೇ ಬೆಂಗಳೂರು ನಗರದಲ್ಲಿ ಏಕೈಕ ಸೈಬರ್‌ ಕ್ರೈಂ ಪೊಲೀಸ್‌ ಠಾಣೆ ಇದೆ. ಈ ಠಾಣೆಯಲ್ಲಿ ಪ್ರತಿದಿನ 30ರಿಂದ 40 ಪ್ರಕರಣಗಳು ದಾಖಲಾಗುತ್ತಿವೆ. ಬೆಂಗಳೂರು ಪೊಲೀಸ್‌ ಕಮಿಷನರೇಟ್‌ನ ಎಲ್ಲಾ ಎಂಟು ವಿಭಾಗಗಳಲ್ಲಿ ಸೈಬರ್‌, ಆರ್ಥಿಕ, ಡ್ರಗ್ಸ್‌ (ಸಿಇನ್‌) ಪೊಲೀಸ್‌ ಠಾಣೆಗಳನ್ನು ಸ್ಥಾಪಿಸಬೇಕೆಂಬ ಪ್ರಸ್ತಾವ ರಾಜ್ಯ ಸರ್ಕಾರದ ಬಳಿ ಇದೆ. ಅದಿನ್ನೂ ಕಾರ್ಯರೂಪಕ್ಕೆ ಬರಬೇಕಿದೆ. ವಿಪರ್ಯಾಸವೆಂದರೆ, ಸಿಬ್ಬಂದಿ ಕೊರತೆಯಿಂದಾಗಿ ದಾಖಲಾದ ಪ್ರಕರಣಗಳ ಪೈಕಿ ಕೇವಲ 10ರಷ್ಟು ಪ್ರಕರಣಗಳನ್ನು ಭೇದಿಸಲೂ ಸಾಧ್ಯವಾಗಿಲ್ಲ ಎನ್ನುವುದು ರಾಜ್ಯ ಅಪರಾಧ ದಾಖಲಾತಿ ವಿಭಾಗದ ಮಾಹಿತಿ.

ವರ್ಷ; ಪ್ರಕರಣ; ದೋಷಾರೋಪ ಪಟ್ಟಿ; ಬಂಧಿತರು

2016; 7,747; 75; 84

2017; 2,697; 62; 168

2018; 5,238; 27, 96

2019; 9,999; –; –

ಪ್ರತಿಕ್ರಿಯಿಸಿ:9606038256

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.