ADVERTISEMENT

₹ 78 ಲಕ್ಷ ಸೈಬರ್ ವಂಚನೆ: ಟೆಕಿ ಸೇರಿದಂತೆ ಹಣ ಕಳೆದುಕೊಂಡ ಮೂವರು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 16:13 IST
Last Updated 6 ಡಿಸೆಂಬರ್ 2025, 16:13 IST
   

ಬೆಂಗಳೂರು: ವೈಟ್‌ಫೀಲ್ಡ್‌ ಸೈಬರ್ ಅಪರಾಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಸೈಬರ್ ವಂಚನೆ ಪ್ರಕರಣಗಳಲ್ಲಿ ಟೆಕಿ ಸೇರಿದಂತೆ ಮೂವರು ₹78 ಲಕ್ಷ ಕಳೆದುಕೊಂಡಿದ್ದಾರೆ.

ಹಣ ಕಳೆದುಕೊಂಡವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಅಡಿ ಪ್ರಕರಣ ದಾಖಲಿಸಿಕೊಂಡು ಸೈಬರ್ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.  

ಬೆಳ್ಳಂದೂರಿನ ರಮೇಶ್‌ಕುಮಾರ್ ಹೆಗ್ಡೆ ಅವರು ಸೈಬರ್ ವಂಚಕರ ಗಾಳಕ್ಕೆ ಸಿಲುಕಿ ₹28 ಲಕ್ಷ ಕಳೆದುಕೊಂಡಿದ್ದಾರೆ.

ADVERTISEMENT

ನವೆಂಬರ್‌ 11ರಂದು ಅವರು ಮುಸ್ಕಾನ್‌ ಅಗರ್ವಾಲ್‌ ಹೆಸರಿನ ವ್ಯಕ್ತಿ ‘ಟೆಲಿಗ್ರಾಂ’ ಆ್ಯಪ್‌ ಮೂಲಕ ಪಾರ್ಟ್‌ಟೈಮ್‌ ಜಾಬ್ ಬಗ್ಗೆ ಸಂದೇಶ ಕಳುಹಿಸಿದ್ದರು. ನಂತರ, ಕರೆ ಮಾಡಿ ಲಿಂಕ್‌ ಮೂಲಕ ನೋಂದಣಿ ಮಾಡಿಕೊಂಡು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರಲಿದೆ ಎಂಬುದಾಗಿ ನಂಬಿಸಿದ್ದರು. ದೂರುದಾರರು ತಮ್ಮ ಹೆಸರಿನಲ್ಲಿದ್ದ ಬ್ಯಾಂಕ್‌ ಖಾತೆ ಹಾಗೂ ಪತ್ನಿಯ ಬ್ಯಾಂಕ್‌ ಖಾತೆಯಿಂದ ವಂಚಕರು ಕಳುಹಿಸಿದ್ದ 20 ಪ್ರತ್ಯೇಕ ಬ್ಯಾಂಕ್‌ ಖಾತೆಗಳಿಗೆ ₹28.42 ಲಕ್ಷ ವರ್ಗಾವಣೆ ಮಾಡಿದ್ದರು. ಆರಂಭದಲ್ಲಿ ₹9 ಸಾವಿರ ಲಾಭವನ್ನು ವಂಚಕರು ವಾಪಸ್‌ ನೀಡಿದ್ದರು. ನಂತರ, ಯಾವುದೇ ಹಣವನ್ನೂ ನೀಡಿಲ್ಲ. ಕೆಲವು ದಿನಗಳ ಬಳಿಕ ವಂಚನೆಗೆ ಒಳಗಾಗಿರುವುದು ದೂರುದಾರರಿಗೆ ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದರು.

ಯುವಕನಿಂದ ₹45 ಲಕ್ಷ ದೋಚಿದ ಕಳ್ಳರು: ಸೈಬರ್‌ ವಂಚಕರ ಬಲೆಗೆ ಬಿದ್ದು ಯುವಕ ಸಾಯಿಮಣಿ ಪ್ರಸಾದ್ ಮುದ್ದಣ್ಣ ಅವರು ₹45 ಲಕ್ಷ ಕಳೆದುಕೊಂಡಿದ್ದಾರೆ. ಸಾಯಿಮಣಿ ಅವರಿಗೆ ‘ಶಾದಿ ಡಾಟ್‌ ಕಾಂ’ನಲ್ಲಿ ಕಾರುಣ್ಯ ರಾಘವ್‌ ಎಂಬುವವರ ಪರಿಚಯವಾಗಿತ್ತು. ಇಬ್ಬರು ಮೊಬೈಲ್‌ ಸಂಖ್ಯೆಯನ್ನು ಪರಸ್ಪರ ಬದಲಾವಣೆ ಮಾಡಿಕೊಂಡು ಚಾಟ್ ನಡೆಸುತ್ತಿದ್ದರು. ಕ್ರಿಪ್ಟೊ ಕರೆನ್ಸಿಗೆ ಸಂಬಂಧಿಸಿದ ಆ್ಯಪ್‌ನ ಲಿಂಕ್‌ ಕಳುಹಿಸಿ, ಅದರ ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳವಂತೆ ಕಾರುಣ್ಯ ಅವರು ಸಾಯಿಮಣಿ ಅವರಿಗೆ ತಿಳಿಸಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಯ ಮಾತು ನಂಬಿದ್ದ, ದೂರುದಾರರು ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ನೋಂದಣಿ ಮಾಡಿಕೊಂಡಿದ್ದರು. ಆರಂಭದಲ್ಲಿ ₹ 50 ಸಾವಿರ ಹೂಡಿಕೆ ಮಾಡಿದ್ದರು. ಆ ಹಣಕ್ಕೆ ಲಾಭದ ರೂಪದಲ್ಲಿ ₹ 30 ಸಾವಿರ ವಾಪಸ್ ನೀಡಲಾಗಿತ್ತು. ಇನ್ನೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭ ದೊರೆಯಲಿದೆ ಎಂದು ಸೈಬರ್ ವಂಚಕರು ಆಮಿಷವೊಡ್ಡಿದ್ದರು.

ವಂಚಕರು ಕಳುಹಿಸಿದ ಮೂರು ಬೇರೆ ಬೇರೆ ಬ್ಯಾಂಕ್‌ನ ಖಾತೆಗಳಿಗೆ ದೂರುದಾರರು ಹಂತಹಂತವಾಗಿ ₹45 ಲಕ್ಷ ವರ್ಗಾವಣೆ ಮಾಡಿದ್ದರು. ಅದಾದ ಮೇಲೆ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.

₹15 ಲಕ್ಷ ಕಳೆದುಕೊಂಡ ಟೆಕಿ: ವೈಟ್‌ಫೀಲ್ಡ್ ನಿವಾಸಿ, ಸಾಫ್ಟ್‌ವೇರ್ ಉದ್ಯೋಗಿ ಶ್ರೀನಿವಾಸ್‌ ಶಾವಿ ಅವರು ₹15 ಲಕ್ಷ ಕಳೆದುಕೊಂಡಿದ್ದು ಈ ಸಂಬಂಧ ವೈಟ್‌ಫೀಲ್ಡ್‌ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.

ಅಪರಿಚಿತರು ಕಳುಹಿಸಿದ ಲಿಂಕ್ ಮೂಲಕ ‘ವೆಲ್ತ್‌ ಹಂಟರ್ಸ್‌ ನೆಟ್‌ವರ್ಕ್‌ ಎಕ್ಸ್‌’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದರು. ಆ ಗ್ರೂಪ್‌ನಲ್ಲಿ ಷೇರು ಮಾರುಕಟ್ಟೆಯ ಚರ್ಚೆ ಆಗಿತ್ತು. ಅದೇ ಗ್ರೂಪ್‌ನಲ್ಲಿ ಸೈಬರ್ ವಂಚಕರು ಮಾತು ನಂಬಿದ್ದ ದೂರುದಾರರು, ಹೂಡಿಕೆ ಮಾಡಲು ಆರಂಭಿಸಿದ್ದರು. ಆರಂಭದಲ್ಲಿ ₹25 ಸಾವಿರ ಹೂಡಿಕೆ ಮಾಡಿದ್ದರು. ಬಳಿಕ ₹15.80 ಲಕ್ಷ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆ ಎಂದು ಸೈಬರ್ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.