ADVERTISEMENT

ಸೈಬರ್ ಅಪರಾಧ: ಹೂಡಿಕೆ ಎಂದು ವಕೀಲರಿಂದ ₹70 ಲಕ್ಷ ದೋಚಿದ ವಂಚಕರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 16:25 IST
Last Updated 2 ಮಾರ್ಚ್ 2026, 16:25 IST
<div class="paragraphs"><p>ಸೈಬರ್ ವಂಚಕರು</p></div>

ಸೈಬರ್ ವಂಚಕರು

   

ಬೆಂಗಳೂರು: ಹೂಡಿಕೆಯ ಹಣಕ್ಕೆ ಹೆಚ್ಚಿನ ಲಾಭ ನೀಡಲಾಗುವುದು ಎಂದು ಸೈಬರ್‌ ವಂಚಕರು ಆಮಿಷವೊಡ್ಡಿ ವಕೀಲರೊಬ್ಬರಿಂದ ₹70 ಲಕ್ಷ ದೋಚಿದ್ದಾರೆ. ಈ ಸಂಬಂಧ ಪಶ್ಚಿಮ ಸೈಬರ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿಜಯನಗರದ 43 ವರ್ಷದ ನಿವಾಸಿ, ವಕೀಲ ಹಣ ಕಳೆದುಕೊಂಡಿದ್ದಾರೆ. ಅವರು ನೀಡಿದ ದೂರು ಆಧರಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ 318(4) ಹಾಗೂ 319(2) ಅಡಿ ಪ್ರಕರಣ ದಾಖಲಿಸಿಕೊಂಡು ಸೈಬರ್‌ ವಂಚಕರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ವಕೀಲರ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಹೂಡಿಕೆ ಸಂಬಂಧ ಸಂದೇಶವೊಂದು ಬಂದಿತ್ತು. ಅದಾದ ಕೆಲವೇ ಕ್ಷಣಗಳಲ್ಲಿ ಕರೆ ಮಾಡಿದ್ದ ವಂಚಕರು, ವಕೀಲರ ಜತೆಗೆ ಚರ್ಚಿಸಿದ್ದರು. ಬಳಿಕ ಎಸ್‌ಬಿಐ ಸೆಕ್ಯೂರಿಟಿಸ್‌ ಡಿಸ್ಕಷನ್‌ ಎನ್ನುವ ಗ್ರೂಪ್‌ಗೆ ಸೇರಿಸಿದ್ದರು. ಆ ಗ್ರೂಪ್‌ನಲ್ಲಿದ್ದ ಮಥೈ ಕುಂಜುಮೊನ್, ಸೋನಾಲ್‌ ಭಗತ್‌, ಕೀರ್ತನಾ, ಅರವಿಂದ್‌, ಮಣಿಕ್‌ಪ್ರಭಾ ಅವರು ಎಸ್‌ಬಿಐ ಸೆಕ್ಯೂರಿಟಿಸ್ ಬಗ್ಗೆ ಮಾಹಿತಿ ತಿಳಿಸಿದ್ದರು. ಸ್ಕ್ರೀನ್‌ಶಾಟ್‌ ಹಾಕಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ತಿಂಗಳಿಗೆ ಶೇ 200ರಷ್ಟು ಲಾಭ ಪಡೆಯಬಹುದು ಎಂದು ನಂಬಿಸಿದ್ದರು. ಬಳಿಕ ಲಿಂಕ್‌ ಕಳುಹಿಸಿ ಎಸ್‌ಬಿಐ ಸೆಕ್ಯೂರಿಟಿಸ್ ಎನ್ನುವ ಆ್ಯಪ್‌ ಇನ್‌ಸ್ಟಾಲ್ ಮಾಡಿಸಿದ್ದರು. ಅವರ ಮಾತು ನಂಬಿದ್ದ ವಕೀಲರು, ಆರಂಭದಲ್ಲಿ ₹10 ಸಾವಿರ ಹೂಡಿಕೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ವಕೀಲರು ತಮ್ಮ ಏಳು ಬ್ಯಾಂಕ್‌ ಖಾತೆಗಳಿಂದ ಸೈಬರ್ ವಂಚಕರು ನೀಡಿದ ಬೇರೆ ಬೇರೆ ಬ್ಯಾಂಕ್‌ನ 18 ಖಾತೆಗಳಿಗೆ 2025ರ ನವೆಂಬರ್‌ 24ರಿಂದ 2025ರ ಡಿಸೆಂಬರ್‌ 29ರ ವರೆಗೆ ಹಂತಹಂತವಾಗಿ ₹77.82 ಲಕ್ಷ ವರ್ಗಾವಣೆ ಮಾಡಿದ್ದರು. ಅದಾದ ಮೇಲೆ ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶವನ್ನು ಮೋಸ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.