ದಾಬಸ್‌ಪೇಟೆ: ದಾಬಸ್‌ಪೇಟೆ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ವಿನಾಯಕ ಕ್ರಷರ್‌ಗೆ ಸೇರಿದ ಟಿಪ್ಪರ್‌ವೊಂದು ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿ ಚಾಲಕ, ಹಾಲೇನಹಳ್ಳಿಯ ನಿವಾಸಿ ಉಮೇಶ್ (38) ಅವರು ಮೃತಪಟ್ಟಿದ್ದಾರೆ. ಸೋಂಪುರ ಹೋಬಳಿ ನರಸೀಪುರ ಪಂಚಾಯಿತಿ ಮಾಕೇನಹಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಅಪಘಾತವಾಗಿದೆ.
ಉಮೇಶ್ ಅವರು ಕಲ್ಲು ತುಂಬಿಕೊಂಡು ಬರಲು ಟ್ರ್ಯಾಕ್ಟರ್ ತೆಗೆದುಕೊಂಡು ಕ್ರಷರ್‌ಗೆ ಹೋಗಿದ್ದರು. ಹಿಂದಿನಿಂದ ಬರುತ್ತಿದ್ದ ಟಿಪ್ಪರ್‌ನ ಬ್ರೇಕ್ ವಿಫಲಗೊಂಡು ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿದೆ. ಕಲ್ಲಿನ ಲೋಡ್ ಇದ್ದ ಕಾರಣ ಟಿಪ್ಪರ್ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕನ ಮೇಲೆ ಕಲ್ಲುಗಳು ಬಿದ್ದು ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ದಾಬಸ್‌ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಸಾವು: ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಮೃತಪಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಸುಶೀಲನಗರದ ನಿವಾಸಿ ಗಂಗಾಬಾಯಿ (46) ಮೃತಪಟ್ಟವರು.
ಬೈಕ್ ಸವಾರ ನಾಗೇಶ್ ನಾಯ್ಕ್ (21) ಗಾಯಗೊಂಡಿದ್ದಾರೆ. ಸೋಂಪುರ ಹೋಬಳಿಯ ಪೆಮ್ಮನಹಳ್ಳಿ ಗ್ರಾಮದಲ್ಲಿ ವಾಸವಿದ್ದರು.
ಸೋಮವಾರ ಬೆಳಿಗ್ಗೆ ಸುಮಾರು 8.45ರ ಸುಮಾರಿಗೆ ದಾಬಸ್‌ಪೇಟೆ ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಎಂ–ಸ್ಯಾಂಡ್ ತುಂಬಿಕೊಂಡು ಟ್ರ್ಯಾಕ್ಟರ್ ಬರುತ್ತಿತ್ತು. ತಾಯಿ ಹಾಗೂ ಮಗ ಬರುತ್ತಿದ್ದ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಗಂಗಾಬಾಯಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಜಗದೀಶ್, ಇನ್‌ಸ್ಪೆಕ್ಟರ್ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.