ADVERTISEMENT

ದಾಬಸ್ ಪೇಟೆ: ರಾಜಕಾಲುವೆ ಸರ್ವೆ ಮಾಡಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 18:34 IST
Last Updated 8 ಡಿಸೆಂಬರ್ 2023, 18:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದಾಬಸ್ ಪೇಟೆ: ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದ 6 ತಿಂಗಳ ನಂತರ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಶುಕ್ರವಾರ ಸರ್ವೆ ನಡೆಸಿದರು.

ಪಟ್ಟಣದ ಅಗಳಕುಪ್ಪೆ ರಸ್ತೆಗೆ ಹೊಂದಿಕೊಂಡಂತೆ ಇರುವ ರಾಜಕಾಲುವೆಯನ್ನು ಪ್ರಭಾವಿಗಳು ಕಬಳಿಸಿ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದರು. ರಾಜಕಾಲುವೆ ಒತ್ತುವರಿಯಾಗಿರುವುದು ಬೆಳಕಿಗೆ ಬಂದು ಹಲವು ತಿಂಗಳು ಕಳೆದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸಿರಲಿಲ್ಲ. ಈ ಬಗ್ಗೆ ಕುಮಾರಯ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸರ್ವೆ ನಂಬರ್ 4ರಲ್ಲಿ ‘ಬ’ ಕರಾಬು ಸೇರಿದಂತೆ ಅಕ್ರಮವಾಗಿ ರಾಜಕಾಲುವೆ ಜಾಗವನ್ನೂ ಸೈಟ್‌ಗಳಾಗಿ ವಿಂಗಡಿಸಿ ಮಾರಾಟ ಮಾಡಲಾಗಿದೆ. ಒತ್ತುವರಿ ಸಾಬೀತಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದರು. 

ADVERTISEMENT

ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಒತ್ತುವರಿ ತೆರವುಗೊಳಿಸುವಂತೆ ಜೂನ್ 14ರಂದು ಆದೇಶ ಹೊರಡಿಸಿತ್ತು. ಇದೀಗ ನೆಲಮಂಗಲ ತಹಶೀಲ್ದಾರ್ ಕೆ.ಅರುಂಧತಿ, ತಾಲ್ಲೂಕು ಪಂಚಾಯಿತಿ ಇಒ ಎಸ್. ಮಧು, ಸರ್ವೆ ಇಲಾಖೆಯ ಎಡಿಎಲ್ಆರ್ ನಯನಾ, ಲೋಕೋಪಯೋಗಿ ಇಲಾಖೆಯ ನಟರಾಜು, ಉಪ ತಹಶೀಲ್ದಾರ್ ಬಿ.ಸಿ. ಶಶಿಧರ್, ದಾಬಸ್ ಪೇಟೆ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್‌ ಬಿ.ರಾಜು, ಪಿಡಿಒ ರವಿಶಂಕರ್, ರಾಜಸ್ವ ನೀರಿಕ್ಷಕ ಎಚ್.ಎಂ.ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ವೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.