ಬೆಂಗಳೂರು: ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಿಶಿವಾಲೆ ಸಮೀಪದ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಪ್ರೌಢಶಾಲೆಗಳ ಕ್ಲಸ್ಟರ್ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ದೊಣ್ಣೆ, ಡ್ಯಾಗರ್, ಚಾಕು ಹಾಗೂ ವಿಕೆಟ್ ಹಿಡಿದು ಬಡಿದಾಡಿಕೊಂಡಿದ್ದು, ಈ ಗಲಾಟೆಯಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಘಟನೆಯಿಂದ ಈ ಭಾಗದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೊತ್ತನೂರು ಠಾಣೆ ಪೊಲೀಸರು, ಭವಿಷ್(20), ನಿರಂಜನ್(20) ಹಾಗೂ ಇಬ್ಬರು ಬಾಲಕರನ್ನು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಪರಸ್ಪರ ಡ್ಯಾಗರ್ ಹಾಗೂ ವಿಕೆಟ್ ಹಿಡಿದು ಹೊಡೆದಾಡಿಕೊಂಡ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಅದನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ವಿಡಿಯೊ ತುಣುಕು ಹರಿದಾಡುತ್ತಿದ್ದಂತೆಯೇ ಹಲವರು ಘಟನೆ ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ಅದಾದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ’ ಎಂದು ಸ್ಥಳೀಯರು ಹೇಳಿದರು.
ಶಾಲಾ ಆವರಣದಲ್ಲಿ ಮಂಗಳವಾರ ಕ್ಲಸ್ಟರ್ ಮಟ್ಟದ ಕೊಕ್ಕೊ ಪಂದ್ಯಾವಳಿ ಆಯೋಜಿಸಲಾಗಿತ್ತು. ಹಲವು ಶಾಲೆಗಳ ನೂರಾರು ವಿದ್ಯಾರ್ಥಿಗಳು ಹಾಗೂ ಹಲವು ಶಿಕ್ಷಕರು ಪಾಲ್ಗೊಂಡಿದ್ದರು. ಅಲ್ಲದೇ, ಪಂದ್ಯಾವಳಿಯ ವೀಕ್ಷಣೆಗೆ ಸುತ್ತಮುತ್ತಲ ಬಡಾವಣೆಗಳ ಜನರೂ ಸೇರಿದ್ದರು. ಅವರೆಲ್ಲರ ಸಮ್ಮುಖದಲ್ಲೇ ಗಲಾಟೆ ನಡೆದಿದೆ.
ಬುದ್ಧಿಮಾತು ಹೇಳಿದ ವ್ಯಕ್ತಿ ಮೇಲೆಯೂ ಹಲ್ಲೆ: ಪಂದ್ಯಾವಳಿ ವೀಕ್ಷಣೆಗೆ ಬಂದಿದ್ದ ಶಬ್ಬೀರ್ ಎಂಬುವವರು ಗಲಾಟೆ ಬಿಡಿಸಲು ಮುಂದಾಗಿದ್ದರು. ಆದರೆ, ನಶೆಯಲ್ಲಿದ್ದ ಆರೋಪಿಗಳು ಶಬ್ಬೀರ್ ಅವರ ತಲೆಗೆ ಚಾಕುವಿನಿಂದ ಗುದ್ದಿ ಹಲ್ಲೆ ನಡೆಸಿದ್ದಾರೆ. ಅವರ ಮೊಬೈಲ್ ಸಹ ಒಡೆದು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಠಾಣಾ ವ್ಯಾಪ್ತಿಯ ಬಡಾವಣೆಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿಲ್ಲ. ಇದರಿಂದ ಪುಂಡರ ಹಾವಳಿ ಮಿತಿಮೀರಿದೆ. ಈ ಭಾಗದಲ್ಲಿ ಪೊಲೀಸ್ ಗಸ್ತು ಹಾಗೂ ಹೊಯ್ಸಳ ವಾಹನ ಓಡಾಟವನ್ನು ಹೆಚ್ಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಭೀತಿಗೆ ಒಳಗಾದ ವಿದ್ಯಾರ್ಥಿಗಳು
‘ಸೊಣ್ಣಪ್ಪನಹಳ್ಳಿ ಹಾಗೂ ಬಿಳಿಶಿವಾಲೆ ಶಾಲೆಗಳ ತಂಡದ ಮಧ್ಯೆ ಕೊಕ್ಕೊ ಪಂದ್ಯ ನಡೆಯುತ್ತಿದ್ದ ವೇಳೆ ತೀರ್ಪಿನ ವಿಚಾರಕ್ಕೆ ಗಲಾಟೆ ಆರಂಭವಾಗಿದೆ. ‘ತೀರ್ಪುಗಾರರು ತಪ್ಪು ತೀರ್ಪು ನೀಡಿದ್ದಾರೆ’ ಎಂದು ಸೊಣ್ಣಪ್ಪನಹಳ್ಳಿಯ ವಿದ್ಯಾರ್ಥಿಗಳು ಆರೋಪಿಸಿದರು. ಆ ತಂಡವನ್ನು ಬೆಂಬಲಿಸುತ್ತಿದ್ದವರು ಗಲಾಟೆ ಆರಂಭಿಸಿದರು. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ನಾಲ್ವರು ಆರೋಪಿಗಳು ದಿಢೀರ್ ಆಗಿ ಡ್ಯಾಗರ್ ಹಾಗೂ ಚಾಕುಗಳನ್ನು ಪ್ರದರ್ಶಿಸುತ್ತಾ ಮೈದಾನದ ಸುತ್ತ ಓಡಾಟ ನಡೆಸಿದರು. ಡ್ಯಾಗರ್ ಹಿಡಿದು ತೀರ್ಪುಗಾರರನ್ನು ಬೆದರಿಸಿದರು. ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಕ್ಷಣ ಕಾಲ ಭೀತಿಗೆ ಒಳಗಾದರು. ಆತಂಕಕ್ಕೆ ಒಳಗಾದ ಕೆಲವರು ಕಣ್ಣೀರು ಹಾಕಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
‘ಆರೋಪಿಗಳು ಮಾದಕವಸ್ತು ಸೇವಿಸಿರಬಹುದು‘ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.