ಬಂಧನ
(ಪ್ರಾತಿನಿಧಿಕ ಚಿತ್ರ)
ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕು ಬಮೂಲ್ ನಿರ್ದೇಶಕರ ಚುನಾವಣೆ (ಮೇ 25 ) ಕಾರಣದಿಂದ ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದ ಡೇರಿ ಅಧ್ಯಕ್ಷ ಶಂಕರರಾಜು ಅವರ ಅಪಹರಣ ಆರೋಪಕ್ಕೆ ಸಂಬಂಧಿಸಿದಂತೆ ದಾಬಸ್‌ಪೇಟೆ ಪೊಲೀಸರು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ ಚೌಧರಿ ಅವರನ್ನು ಶನಿವಾರ ರಾತ್ರಿ ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ಜಗದೀಶ್ ಚೌಧರಿ ಬಂಧನ ವಿರೋಧಿಸಿ, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಠಾಣೆ ಮುಂಭಾಗ ಜಮಾಯಿಸಿ, ಪೊಲೀಸರ ವಿರುದ್ಧ ಘೋಷಣೆ ಕೂಗಿದರು.
'ಮೇ 23ರ ಬೆಳಿಗ್ಗೆ ಶಂಕರರಾಜು ಅವರು ಮದುವೆ ಸಮಾರಂಭಕ್ಕೆ ತುಮಕೂರಿಗೆ ಹೋದವರು ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಬಮೂಲ್ ಚುನಾವಣೆ ಕಾರಣದಿಂದ ರಾತ್ರಿ 10.30ಕ್ಕೆ ಜಗದೀಶ್ ಅವರು ಶಂಕರ್ ರಾಜು ಪತ್ನಿಗೆ ಕರೆ ಮಾಡಿ, ‘ನಿಮ್ಮ ಪತಿಯನ್ನು ಕರೆದುಕೊಂಡು ಬಂದಿದ್ದೇನೆ’ ಎಂದಿದ್ದಾರೆ. ಪತಿಗೆ ಫೋನ್ ಕೊಡುವಂತೆ ಅವರು ಕೇಳಿದಾಗ, ‘ಈ ವಿಚಾರಕ್ಕೆ ನೀವು ತಲೆ ಹಾಕಬೇಡಿ. ಪರಿಣಾಮ ಸರಿ ಇರುವುದಿಲ್ಲ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಶಂಕರರಾಜು ಪತ್ನಿ ಶಿವಮ್ಮ ದೂರು ದಾಖಲಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
ಬೆಂಗಳೂರಿನಲ್ಲಿ ಜಗದೀಶ್ ಚೌಧರಿ ಅವರನ್ನು ಬಂಧಿಸಿ, ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಈ ವೇಳೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಠಾಣೆಗೆ ಬಂದು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಪೊಲೀಸರು ಹಾಗೂ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ವಿಷಯ ತಿಳಿದು ಠಾಣೆಗೆ ಬಂದ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ಕಾರ್ಯಕರ್ತರಿಗೆ ಮನವಿ ಮಾಡಿದರು. ಜಗದೀಶ್ ಚೌಧರಿ ಹಾಗೂ ಶಂಕರರಾಜು ಅವರ ವಿಚಾರಣೆ ನಡೆಸಿ, ಹೇಳಿಕೆ ಪಡೆದು ಬಿಡುಗಡೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.