ADVERTISEMENT

‘ಮಾದಿಗರು ದಕ್ಕಲಿಗರೊಂದಿಗೆ ವೈವಾಹಿಕ ಸಂಬಂಧ ಬೆಳೆಸಲಿ’

ಆದಿಜಾಂಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 17:36 IST
Last Updated 4 ಫೆಬ್ರುವರಿ 2022, 17:36 IST

ಬೆಂಗಳೂರು: ‘ಮಾದಿಗರು ದಕ್ಕಲಿಗರೊಂದಿಗೆ ವೈವಾಹಿಕ ಸಂಬಂಧ ಬೆಳೆಸಬೇಕು. ಆ ಮೂಲಕ ಸಾಮಾಜಿಕ ಸಮಾನತೆಯತ್ತ ಹೆಜ್ಜೆ ಇಡಬೇಕು. ಇದಕ್ಕಾಗಿ ಮುಂದಿನ ದಿನಗಳಲ್ಲಿ ದಕ್ಕಲಿಗರ ಹಟ್ಟಿಗಳಿಗೆ ಭೇಟಿ ನೀಡಿ ಜನರಲ್ಲಿ ಪರಿವರ್ತನೆ ತರಲು ಪ್ರಯತ್ನಿಸಲಾಗುವುದು’ ಎಂದು ಹಿರಿಯೂರಿನ ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

‘ದಕ್ಕಲಿಗ ಸಮುದಾಯದ ಸಮಸ್ಯೆಗಳು ಮತ್ತು ಪರಿಹಾರ’ ಕುರಿತು ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

‘ದಕ್ಕಲಿಗರು ಕೀಳರಿಮೆ ತೊರೆದು ಸುಸ್ಥಿರ ಬದುಕು ಕಟ್ಟಿಕೊಳ್ಳಬೇಕು. ದಕ್ಕಲಿಗರು ಆಹ್ವಾನಿಸಿದರೆ ಅವರ ಕೇರಿಗಳಿಗೆ ಆದಿಜಾಂಬವ ಮಠಾಧೀಶರು ಭೇಟಿ ನೀಡಲಿದ್ದಾರೆ. ಅವರು ಕೂಡ ಮಾದಿಗರ ಕಾಲೊನಿಗೆ ಬರಲಿ’ ಎಂದರು.

ADVERTISEMENT

ಕಾಂಗ್ರೆಸ್‌ ಮುಖಂಡ ಎಚ್‌.ಆಂಜನೇಯ, ‘ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ದಕ್ಕಲಿಗರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗಿತ್ತು. 2018ರಲ್ಲಿ ಒಟ್ಟು 290 ಕುಟುಂಬಗಳನ್ನು ಗುರುತಿಸಲಾಗಿತ್ತು. ಈ ಪೈಕಿ 268ಕ್ಕೂ ಹೆಚ್ಚು ಕುಟುಂಬಗಳಿಗೆ ವೈಯಕ್ತಿಕ ಸಾಲ ಸೌಲಭ್ಯ ನೀಡಲಾಗಿತ್ತು’ ಎಂದು ಹೇಳಿದರು.

‘ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ದಕ್ಕಲಿಗರಿಗಾಗಿ ಭೂ ಒಡೆತನ ಯೋಜನೆ ಜಾರಿಗೊಳಿಸಲು ಶ್ರಮಿಸಿದ್ದೆ. ಇದಕ್ಕಾಗಿ 235 ಎಕರೆ ಜಮೀನನ್ನೂ ಗುರುತಿಸಲಾಗಿತ್ತು. ಭೂ ಖರೀದಿ ಹಾಗೂ ಹಸ್ತಾಂತರ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಈ ಪ್ರಕ್ರಿಯೆ ಹಾಗೂ ಕಡತ ವಿಲೇವಾರಿಯನ್ನು ಈಗಿನ ಸರ್ಕಾರ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು. ‌

ಆರ್‌ಎಸ್‌ಎಸ್‌ನ ಸಾಮರಸ್ಯ ವೇದಿಕೆಯ ಸಂಚಾಲಕ ವಾದಿರಾಜ್‌, ‘ದಕ್ಕಲಿಗರ ಅಭಿವೃದ್ಧಿಗಾಗಿ ಪಕ್ಷ ಬೇಧ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಈ ಸಮುದಾಯದ ಮೂರು ಮಂದಿ ಮಾತ್ರ ಸರ್ಕಾರಿ ಕೆಲಸ ಪಡೆದಿದ್ದಾರೆ. 12 ಮಂದಿಯಷ್ಟೇ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದಾರೆ. ಪಿಯುಸಿ ಮುಗಿಸಿದವರು 9 ಜನ ಮಾತ್ರ. ವೇದಿಕೆಯು ನಡೆಸಿದ ಸಮೀಕ್ಷೆಯಿಂದ ಇದು ಗೊತ್ತಾಗಿದೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ಹಂಪಿಯ ಮಾತಂಗ ಮಠದ ಮಾತಂಗಮುನಿ,ಕೋಡಿಹಳ್ಳಿ ಆದಿಜಾಂಬವ ಮಠದ ಗುರುಪ್ರಕಾಶ್‌ ಮುನಿ, ಮಾಗಡಿಯ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ, ಎಚ್‌.ಆರ್‌.ತೇಗನೂರ್‌, ಕೆಪಿಎಸ್‌ಸಿ ಮಾಜಿ ಸದಸ್ಯ ದುಗ್ಗಪ್ಪ, ಹೆಣ್ಣೂರು ಲಕ್ಷ್ಮಿನಾರಾಯಣ, ದಾವಣಗೆರೆ ರಾಮಣ್ಣ, ಶಂಕರಪ್ಪ, ಹುಚ್ಚಪ್ಪ, ಕೊಡಿಗೆಹಳ್ಳಿ ನಾಗರಾಜ್, ಸುಬ್ಬರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.