
ನಗರದ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಆಯೋಜಿಸಿದ್ದ ದಕ್ಷಿಣಾಸ್ಯದರ್ಶಿನಿ ಸಮಾರೋಪ ಸಮಾರಂಭದಲ್ಲಿ ವಿಜ್ಞಾನ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್. ಸೋಮನಾಥ್, ಶಂಕರಭಾರತಿ ಸ್ವಾಮಿಜಿ ಮತ್ತು ಬ್ರಹ್ಮಾನಂದ ಭಾರತಿ ಸ್ವಾಮೀಜಿ, ಪ್ರಹ್ಲಾದ್ ರಾಮರಾವ್ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಾಲ್ಕು ದಿನಗಳಿಂದ ವೇದಾಂತ ಹಾಗೂ ವಿಜ್ಞಾನದ ಅನುಸಂಧಾನಕ್ಕೆ ವೇದಿಕೆ ಕಲ್ಪಿಸಿದ್ದ ದಕ್ಷಿಣಾಸ್ಯ ದರ್ಶಿನಿ ರಾಷ್ಟ್ರೀಯ ಪ್ರದರ್ಶನಕ್ಕೆ ತೆರೆಬಿದ್ದಿದೆ.
ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ವಿಜ್ಞಾನದ ಆಸಕ್ತರು ಪಾಲ್ಗೊಂಡು ಸ್ತೋತ್ರದೊಂದಿಗೆ ಪ್ರಯೋಗಗಳ ಮಾದರಿಗಳು, ವಿವರಣೆಯನ್ನು ಆಲಿಸಿ ಕುತೂಹಲ ತಣಿಸಿಕೊಂಡರು.
ಪರಮ್ ಫೌಂಡೇಷನ್ ಹಾಗೂ ವೇದಾಂತ ಭಾರತಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವು ಭಾರತೀಯ ಜ್ಞಾನ ಪರಂಪರೆ ಮತ್ತು ಅತ್ಯಾಧುನಿಕ ವಿಜ್ಞಾನ ಬೇರೆ ಬೇರೆಯಲ್ಲ ಎನ್ನುವುದನ್ನು ಸಾರಿತು.
ವಿಜ್ಞಾನಕ್ಕೆ ಸಂಬಂಧಿಸಿದ 50ಕ್ಕೂ ಹೆಚ್ಚು ಮಳಿಗೆಗಳಿದ್ದು, ಪ್ರತಿಯೊಂದು ಮಳಿಗೆಯೂ ಹೊಸ ಆವಿಷ್ಕಾರ ಮತ್ತು ಮಾಹಿತಿಯ ಕಣಜವಾಗಿತ್ತು. ಸುಮಾರು 70ಕ್ಕೂ ಹೆಚ್ಚು ಶಾಲೆಗಳ 7,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಭಾಗವಹಿಸಿ, ವೇದಾಂತದ ಆಳವಾದ ತತ್ವಗಳಿಗೆ ವೈಜ್ಞಾನಿಕ ರೂಪ ಕಂಡುಕೊಂಡರು ಎಂದು ಸಂಘಟಕರು ತಿಳಿಸಿದರು.
ಸಮುದ್ರದಲ್ಲಿ ಮುಳುಗಿದ ದ್ವಾರಕಾ ನಗರವು ಮರುಜೀವ ಪಡೆದಂತೆ ತ್ರೀ–ಡಿ ತಂತ್ರಜ್ಞಾನದ ಮೂಲಕ ವಿನ್ಯಾಸಗೊಳಿಸಲಾದ ವಿಡಿಯೊ ಪ್ರದರ್ಶನವು ವಿಭಿನ್ನ ಅನುಭವವನ್ನುಂಟು ಮಾಡಿತು.
ಅಧ್ಯಯನ ಹೆಚ್ಚಲಿ: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿಜ್ಞಾನಿ ಪ್ರಹ್ಲಾದ ರಾಮರಾವ್, ‘ವೇದ ಹಾಗೂ ವಿಜ್ಞಾನಕ್ಕೆ ಪರಸ್ಪರ ಸಂಬಂಧವಿದ್ದು, ಇದನ್ನು ಮರು ವ್ಯಾಖ್ಯಾನಿಸಿ ಭಾರತೀಯ ಪರಂಪರೆಯನ್ನು ಗಟ್ಟಿಗೊಳಿಸುವ ಕೆಲಸ ನಡೆದಿದೆ. ಕೇಂದ್ರ ಸರ್ಕಾರವೂ ವೈಮಾನಿಕ ಶಾಸ್ತ್ರದ ಕುರಿತು ಅಧ್ಯಯನ ನಡೆಸಲು ಅವಕಾಶ ನೀಡಿದೆ. ವೇದಾಂತ ಭಾರತಿ ಸಂಸ್ಥೆ ಮಕ್ಕಳಲ್ಲಿ ವೇದಗಳ ಹಿನ್ನೆಲೆಯಲ್ಲಿ ವಿಜ್ಞಾನದ ಕುತೂಹಲ ಮೂಡಿಸಿದ ಕ್ರಮ ಮೆಚ್ಚುವಂತದ್ದು’ ಎಂದು ಹೇಳಿದರು.
ಇಸ್ರೊ ಮಾಜಿ ಅಧ್ಯಕ್ಷ ಎಸ್.ಸೋಮನಾಥ್ ಮಾತನಾಡಿ, ‘ತಂತ್ರಜ್ಞಾನದ ಈ ಯುಗದಲ್ಲಿ ನಮ್ಮ ಸಂಪ್ರದಾಯ, ಧರ್ಮದ ಕುರಿತು ಮಾತನಾಡಿದರೆ ಅನಕ್ಷರಸ್ಥರಂತೆ ನೋಡುವ ಸ್ಥಿತಿ ಈಗಲೂ ಇದೆ. ನಮ್ಮಲ್ಲಿ ಪ್ರತಿಯೊಂದರ ಹಿಂದೆ ವೈಜ್ಞಾನಿಕ ಮನೋಭಾವದ ಅಡಿಪಾಯ ಗಟ್ಟಿಯಾಗಿಯೇ ಇದೆ. ಈ ಕುರಿತು ಹೆಚ್ಚೆಚ್ಚು ಕೆಲಸಗಳು ಆಗಬೇಕಿವೆ’ ಎಂದು ತಿಳಿಸಿದರು.
ಗ್ರಾಮೀಣ ಭಾಗಕ್ಕೂ ವಿಸ್ತರಣೆ: ಸಾನ್ನಿಧ್ಯ ವಹಿಸಿದ್ದ ಕೆ. ಆರ್. ನಗರದ ಯಡತೊರೆ ಯೋಗಾನಂದ ಸರಸ್ವತಿ ಮಠದ ಶಂಕರ ಭಾರತಿ ಸ್ವಾಮೀಜಿ ಮಾತನಾಡಿ, ‘ಗಣಿತ, ಖಗೋಳಶಾಸ್ತ್ರ, ಕ್ಯಾಲೆಂಡರ್‌ನಂತರ ಪ್ರಾಚೀನ ವಿಷಯವನ್ನೊಳಗೊಂಡ ಮಾಯಾ ನಾಗರಿಕತೆಯ ಜ್ಞಾನದ ಕುರಿತು ಚರ್ಚೆಗಳು ನಡೆದಿವೆ. ಈ ಕುರಿತು ಇನ್ನಷ್ಟು ಸಂಶೋಧನೆ, ಚಟುವಟಿಕೆಗಳನ್ನು ಆಯೋಜಿಸಬೇಕು ಎನ್ನುವ ಉತ್ಸಾಹವನ್ನು ದಕ್ಷಿಣಾಸ್ಯ ದರ್ಶಿನಿ ರಾಷ್ಟ್ರೀಯ ಪ್ರದರ್ಶನ ನೀಡಿದೆ. ಗ್ರಾಮೀಣ ಹಂತಕ್ಕೂ ಈ ವಿಚಾರವನ್ನು ತೆಗೆದುಕೊಂಡು ಹೋಗಿ ವಿದ್ಯಾರ್ಥಿಗಳ ಚಿಂತನೆಗೆ ಒತ್ತು ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.