ADVERTISEMENT

ದಲಿತರ ಆತ್ಮಕಥೆ ಶಕ್ತಿ ಹೀನರ ಚರಿತ್ರೆ; ಕೋಟಿಗಾನಹಳ್ಳಿ ರಾಮಯ್ಯ

‘ನಮ್ಮ ಹಟ್ಟಿ ಆತ್ಮಕಥೆ’ ಬಗ್ಗೆ ಕೋಟಿಗಾನಹಳ್ಳಿ ರಾಮಯ್ಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 15:48 IST
Last Updated 8 ಫೆಬ್ರುವರಿ 2026, 15:48 IST
ಕೋಟಿಗಾನಹಳ್ಳಿ ರಾಮಯ್ಯ
ಕೋಟಿಗಾನಹಳ್ಳಿ ರಾಮಯ್ಯ   

ಬೆಂಗಳೂರು: ‘ದಲಿತರ ಆತ್ಮಕಥೆಗಳು ಶಕ್ತಿ ಕೇಂದ್ರದ ಚರಿತ್ರೆಯಲ್ಲ. ಅವು ಶಕ್ತಿಹೀನರ ಚರಿತ್ರೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ಕೆ. ದೊರೈರಾಜು ಅವರ ‘ನಮ್ಮ ಹಟ್ಟಿ ಆತ್ಮಕಥೆ’ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹದಿನೈದು ವರ್ಷಗಳ ಈಚೆಗೆ ಬಿಡುಗಡೆಯಾದ ಆತ್ಮಕಥೆಗಳಲ್ಲಿ ಬಹುತೇಕ ಕೃತಿಗಳು ‘ಸೆಲ್ಫಿ’ ಚಿತ್ರದಂತೆ ಇವೆ. ಚಳವಳಿಯೊಂದಿಗಿನ ಸಂಬಂಧ ಮತ್ತು ಅವರ ಕಥನಗಳು ಇರುತ್ತವೆ. ಸಾಮೂಹಿಕ ಚಿತ್ರದಂತೆ ಗೋಚರಿಸುವುದಿಲ್ಲ. ಚಳವಳಿಯ ಚರಿತ್ರೆಯಾಗಿ ಸಾಮೂಹಿಕವಾಗಿ ನೋಡಲು ಅಲ್ಲಿ ಸಿಗುವುದಿಲ್ಲ. ‘ನಮ್ಮ ಹಟ್ಟಿ ಆತ್ಮಕಥೆ’ಯು ಚಳವಳಿಯ ಸಾಮೂಹಿಕ ಚಿತ್ರವನ್ನು ಕಟ್ಟಿಕೊಡುತ್ತದೆ’ ಎಂದು ಹೇಳಿದರು.

ADVERTISEMENT

‘ತಮ್ಮ ಅನುಭವಗಳನ್ನು ದಾಟಿಸಬೇಕಾದ ರೀತಿಯನ್ನು ಅರಿಯದೇ ಹೋದ ಆತ್ಮಕಥೆಗಳಿಗೆ ಇದುವರೆಗೆ ಸಾಕ್ಷಿಯಾಗಿದ್ದೇವೆ. ಈ ಕೃತಿ ಆ ಮಿತಿಯನ್ನು ಮೀರುತ್ತದೆ. ದಲಿತ ಚಳವಳಿಗೆ ಬೂಸಾ ಚಳವಳಿಗಿಂತಲೂ ಹಿಂದಿನ ಚರಿತ್ರೆ ಇದೆ. ಆದರೆ, ದಲಿತ ಚಳವಳಿಯನ್ನು ಬೂಸಾ ಚಳವಳಿಯ ಮೂಲಕ ಗುರುತಿಸುವ ಮಿತಿಗೆ ಒಳಪಡಿಸಲಾಗಿದೆ’ ಎಂದು ತಿಳಿಸಿದರು.

‘ನಮ್ಮ ಕಿರು ಸಾಂಸ್ಕೃತಿಕ ಲೋಕದೃಷ್ಟಿಗಳು ನಮ್ಮ ರಾಜಕೀಯ ಲೋಕದೃಷ್ಟಿ ಆದರೆ ಮಾತ್ರ ನಿಜವಾದ ಪ್ರಜಾಪ್ರಭುತ್ವವನ್ನು ಕಟ್ಟಬಹುದು’ ಎಂದರು.

ಪ್ರಾಧ್ಯಾಪಕ ರವಿಕುಮಾರ್ ಬಾಗಿ ಮಾತನಾಡಿ, ‘ನಮ್ಮ ಹಟ್ಟಿ ಕಥನವು ಆತ್ಮಕಥೆಗಿಂತಲೂ ಒಂದು ಹಟ್ಟಿಯ ಕಥೆಯಾಗಿ ನಿರೂಪಣೆಗೊಂಡಿದೆ. ಇಂದಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಗಳಿಗೆ ಹೊಸ ರೀತಿಯ ಕೊಡುಗೆಯಾಗಿದೆ. 21ನೇ ಶತಮಾನದಲ್ಲಿ ದಲಿತ ಲೋಕದೃಷ್ಟಿ ಎನ್ನುವುದು ಮೈಪಡೆಯಬೇಕಾದ ಹೊಸ ನೀರನ್ನು ನಮ್ಮ ಹಟ್ಟಿ ಕಥನ ಹರಿಸುತ್ತದೆ’ ಎಂದು ವಿಶ್ಲೇಷಿಸಿದರು.

ಬಸವರಾಜ್‌ ಕೌತಾಳ್‌ ಅಧ್ಯಕ್ಷತೆ ವಹಿಸಿದ್ದರು. ಗಂಗಮ್ಮ ಕೆಂಪಮ್ಮ, ವಿ.ಎಲ್. ನರಸಿಂಹಮೂರ್ತಿ, ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.