ADVERTISEMENT

ಕೃಪಾಂಕ ಅವಧಿ ವಿಸ್ತರಿಸಿ: 219 ಶಿಕ್ಷಕರ ಕಾಯಂಗೊಳಿಸಿ- ದಲಿತ ಪದವೀಧರರ ಸಂಘ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 14:49 IST
Last Updated 15 ಅಕ್ಟೋಬರ್ 2025, 14:49 IST
   

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಅಧೀನದಲ್ಲಿ ಬರುವ ವಸತಿಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 219 ಹೊರ ಸಂಪನ್ಮೂಲ ಶಿಕ್ಷಕರ ಸೇವಾ ಕೃಪಾಂಕದ ಅವಧಿಯನ್ನು 2013ರವರೆಗೆ ವಿಸ್ತರಿಸಿ, ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘ ಆಗ್ರಹಿಸಿದೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿ. ಲೋಕೇಶ್, ‘ಕ್ರೈಸ್‌ ಅಡಿಯಲ್ಲಿ 823 ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ವಸತಿಶಾಲೆಗಳು ಕಾರ್ಯನಿರ್ವಹಿಸುತ್ತಿವೆ. 2006–07ರಿಂದ ಹೊರ ಸಂಪನ್ಮೂಲ ಶಿಕ್ಷಕರು ಕೆಲಸ ಮಾಡುತ್ತಿದ್ದು ಕಾಯಂಗೊಳಿಸುವಂತೆ ಹೈಕೋರ್ಟ್‌ ಮೊರೆಹೋಗಲಾಗಿತ್ತು. ನ್ಯಾಯಾಲಯವು, ಪ್ರತಿ ವರ್ಷಕ್ಕೆ ಶೇಕಡ 5ರಂತೆ ಗರಿಷ್ಠ 8 ವರ್ಷಗಳಿಗೆ ಶೇ 40ರಷ್ಟು ಸೇವಾ ಕೃಪಾಂಕ ಪರಿಗಣಿಸುವಂತೆ ಆದೇಶಿಸಿತ್ತು’ ಎಂದು ತಿಳಿಸಿದರು.

‘2011–12ರಲ್ಲಿ ಶಿಕ್ಷಕರ ಹುದ್ದೆಗಳಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿ, ಪೂರ್ಣ ಪ್ರಮಾಣದ ಸೇವಾ ಕೃಪಾಂಕ ಪಡೆದು ಆಯ್ಕೆಯಾಗಿದ್ದಾರೆ. ಈಗ ಸೇವಾ ಕೃಪಾಂಕದ ವಿಸ್ತರಣೆಗಾಗಿ ಹೋರಾಟ ಮಾಡುತ್ತಿರುವ 219 ಶಿಕ್ಷಕರು 2011ರಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ಇವರ ಸೇವಾ ಅವಧಿ ಕಡಿಮೆ ಇದ್ದ ಕಾರಣ ಗರಿಷ್ಠ ಶೇ 40ರಷ್ಟು ಸೇವಾ ಕೃಪಾಂಕದಿಂದ ವಂಚಿತರಾಗಿದ್ದರು. ಹೊರ ಸಂಪನ್ಮೂಲ ಶಿಕ್ಷಕರಿಗೆ ಪ್ರತಿ ವರ್ಷ ನೀಡುವ ಶೇ 5ರಷ್ಟು ಕೃಪಾಂಕವನ್ನು 2014ರಲ್ಲಿ ರದ್ದುಪಡಿಸಿರುವುದು ಮರಣ ಶಾಸನವಾಗಿದೆ’ ಎಂದು ಹೇಳಿದರು.   

ADVERTISEMENT

‘ಸೇವಾ ಕೃಪಾಂಕದ ಅವಧಿಯನ್ನು 2013ರವರೆಗೆ ವಿಸ್ತರಿಸಿ ಕಾಯ್ದೆ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.