
ಬೆಂಗಳೂರು: ರೈಲ್ವೆ ಇಲಾಖೆಯು ಕಾಡುಗೊಂಡನ ಹಳ್ಳಿಯ ಲೇ ಔಟ್‌ನಲ್ಲಿ 29 ದಲಿತ ಕುಟುಂಬಗಳ ಮನೆ ನೆಲಸಮ ಮಾಡಿರುವುದನ್ನು ಪ್ರಶ್ನಿಸಿ ಸಂತ್ರಸ್ತರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಮನೆ ಕಳೆದುಕೊಂಡಿರುವ ಕೆ.ಜಿ.ಹಳ್ಳಿಯ ಚುನಾ ಲೈನ್ ನಿವಾಸಿಗಳಾದ ಯು.ರಾಣಿ ಸೇರಿದಂತೆ 12 ಮಂದಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಜಿ.ಆರ್.ಮೋಹನ್ ಅವರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಸೇರಿದಂತೆ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
‘ಸಂತ್ರಸ್ತ ಕುಟುಂಬಗಳಿಗೆ ಇದೇ 30ರ ನಂತರ ಹೆಚ್ಚುವರಿಯಾಗಿ 30 ದಿನಗಳ ತಾತ್ಕಾಲಿಕ ಆಶ್ರಯ ನೀಡುವ ಬಗ್ಗೆ ನಿಮ್ಮ ನಿಲುವು ಏನೆಂಬುದನ್ನು ತಿಳಿಸಿ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ?: ‘ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ (ಬಿಡಿಎ) 1985ರಲ್ಲಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. 2015-16ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನೆ ಕಟ್ಟಿಕೊಳ್ಳಲು ಪ್ರತಿಯೊಬ್ಬರಿಗೂ ₹3 ಲಕ್ಷ ಸಹಾಯಧನ ನೀಡಿತ್ತು. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ನಾವುಗಳು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದೆವು. ಬಿಬಿಎಂಪಿ ನಮಗೆ ಮೂಲಸೌಕರ್ಯ ಒದಗಿಸಿ ಹಕ್ಕುಪತ್ರಗಳನ್ನೂ ವಿತರಿಸಿದೆ. ಆದರೆ, ರೈಲ್ವೆ ಇಲಾಖೆ ಯಾವುದೇ ನೋಟಿಸ್ ನೀಡದೇ ಅಕ್ಟೋಬರ್ 31ರಂದು ಏಕಾಏಕಿ ನಮ್ಮ 29 ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಇದರಿಂದ ನಾವೆಲ್ಲಾ ಬೀದಿ ಪಾಲಾಗಿದ್ದೇವೆ. ಸದ್ಯ ಸ್ಥಳೀಯ ಲಿಡ್ಕರ್ ಭವನದಲ್ಲಿ ನವೆಂಬರ್ 30ರವರೆಗೆ ತಾತ್ಕಾಲಿಕ ಆಶ್ರಯ ಪಡೆದಿದ್ದೇವೆ. ಆದ್ದರಿಂದ, ವಿವಾದ ಇತ್ಯರ್ಥವಾಗುವ ತನಕ ಹೆಚ್ಚುವರಿಯಾಗಿ 30 ದಿನಗಳ ಕಾಲ ಆಶ್ರಯ ಒದಗಿಸಲು ಜಿಬಿಎಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.