ADVERTISEMENT

ಭೂಸ್ವಾಧೀನ ಪ್ರಕ್ರಿಯೆ ರದ್ದತಿಗೆ ಒತ್ತಾಯ

ಶಿವರಾಮ ಕಾರಂತ ಬಡಾವಣೆ ಯೋಜನೆಗೆ ದಲಿತ ಸಂಘರ್ಷ ಸಮಿತಿ ವಿರೋಧ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 18:48 IST
Last Updated 2 ಅಕ್ಟೋಬರ್ 2021, 18:48 IST
ರಾಮಗೊಂಡನಹಳ್ಳಿಯಿಂದ ಗಾಂಧಿ ನಡಿಗೆ ಹೊರಟಿದ್ದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರನ್ನು ಹಾಗೂ ರೈತರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದರು
ರಾಮಗೊಂಡನಹಳ್ಳಿಯಿಂದ ಗಾಂಧಿ ನಡಿಗೆ ಹೊರಟಿದ್ದ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರನ್ನು ಹಾಗೂ ರೈತರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದರು   

ಯಲಹಂಕ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿ ಪಡಿಸುತ್ತಿರುವ ಡಾ.ಶಿವರಾಮ ಕಾರಂತ ಬಡಾವಣೆಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದ ವಿವಿಧ ಗ್ರಾಮಗಳ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ಭೂಸ್ವಾಧೀನ ಪ್ರಕ್ರಿಯೆಯನ್ನುಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಸಂತ್ರಸ್ತ ರೈತರು ಇಲ್ಲಿನ ಕೆಂಪೇಗೌಡರ ಪ್ರತಿಮೆಯಿಂದ ಮಿನಿವಿಧಾನಸೌಧದವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಲು ಸಿದ್ಧತೆ ನಡೆಸಿದ್ದರು. ಗಾಂಧಿ ವೇಷ ಹಾಗೂ ಖಾದಿ ಉಡುಪು ಧರಿಸಿದ್ದ ಕೆಲರೈತರು ರಾಮಗೊಂಡನಹಳ್ಳಿಯಿಂದ ಯಲಹಂಕದತ್ತ ಮೆರವಣಿಗೆಯಲ್ಲಿ ತೆರಳಲು ಮುಂದಾಗಿದ್ದರು. ಅವರನ್ನು ಆರಂಭದಲ್ಲೇ ಪೊಲೀಸರು ತಡೆದು ವಶಕ್ಕೆ ಪಡೆದರು.

ರೈತಮುಖಂಡ ಮಾವಳಿಪುರ ಬಿ.ಶ್ರೀನಿವಾಸ್, ‘ಬಡಾವಣೆ ಯೋಜನೆಗಾಗಿ 17 ಗ್ರಾಮಗಳ 3,500 ಎಕರೆ ಭೂಮಿಯನ್ನು ವಶಪಡಿಸಿಕೊಂಡಿರುವ ಬಿಡಿಎ, ಸೂಕ್ತ ಪರಿಹಾರ ನೀಡದೆ ರೈತರನ್ನು ಸತಾಯಿಸುತ್ತಿದೆ. ತಮ್ಮ ಜಮೀನುಗಳಲ್ಲಿ ರೈತರು ನಿರ್ಮಿಸಿಕೊಂಡಿದ್ದ ಮನೆಗಳನ್ನು ಧ್ವಂಸಗೊಳಿಸಿ, ಅವರನ್ನು ಒಕ್ಕಲೆಬ್ಬಿಸುತ್ತಿದೆ. ವಶಪಡಿಸಿಕೊಂಡಿರುವ ಜಮೀನು ಶೇ 80ರಷ್ಟು ಅಭಿವೃದ್ಧಿ ಹೊಂದಿದೆ’ ಎಂದರು.

ADVERTISEMENT

ರೈತರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮವನ್ನು ಖಂಡಿಸಿ, ಯಲಹಂಕದ ಸಂತೆ ವೃತ್ತದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಬಳಿ ಜಮಾವಣೆಗೊಂಡ ಇನ್ನೊಂದು ರೈತರ ತಂಡವು ಪ್ರತಿಭಟನೆ ಆರಂಭಿಸಿತು.
ಮಿನಿ ವಿಧಾನಸೌಧದ ಕಡೆಗೆ ಪಾದಯಾತ್ರೆ ಹೊರಟ ಈ ರೈತರನ್ನೂ ಪೊಲೀಸರು ತಡೆದು ವಾಹನಗಳಲ್ಲಿ ಕರೆದೊಯ್ದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಯೋಜಕ ವಿ.ನಾಗರಾಜ್, ‘ಶಾಂತಿಯುತವಾಗಿ ಗಾಂಧಿ ನಡಿಗೆ ಹೊರಟಿದ್ದ ರೈತರನ್ನು ವಶಕ್ಕೆ ಪಡೆದಿರುವ ಪೊಲೀಸರ ಕ್ರಮ ಖಂಡನೀಯ. 2013ರ ಭೂಸ್ವಾಧೀನ ಕಾಯ್ದೆಯನ್ವಯ ಪರಿಹಾರ ನೀಡಬೇಕಾದುದು ಸರಿಯಾದ ಕ್ರಮ. ಹಳೆಯ ಭೂಸ್ವಾಧೀನ ಕಾಯ್ದೆಯನ್ವಯ ಪರಿಹಾರ ನೀಡಿದರೆ ರೈತರಿಗೆ ಅನ್ಯಾಯವಾಗಲಿದೆ. ಸರ್ಕಾರದ ನಡೆ ಇದೇ ರೀತಿ ಮುಂದುವರಿದರೆ ಮುಖ್ಯಮಂತ್ರಿಗಳ ನಿವಾಸದೆದುರು ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ಬೆಂಗಳೂರು ನಗರ ಜಿಲ್ಲಾ ಸಂಯೋಜಕ ರಾಮಗೊಂಡನಹಳ್ಳಿ ರಮೇಶ್, ಸರ್ವೋದಯ ಗ್ರಾಮೀಣಾಭಿವೃದ್ಧಿ ಸೇವಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಪಾದಯಾತ್ರಿ, ಸ್ಥಳೀಯ ಮುಖಂಡರಾದ ಮುನಿರಾಜು, ಎನ್.ಕೃಷ್ಣಪ್ಪ, ಸುರೇಶ್ ಎಸ್.ಮೃತ್ಯುಂಜಯ, ಎನ್.ನಾಗರಾಜು, ರಾಧಮ್ಮ, ಬಿ.ರಾಜಣ್ಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.