ADVERTISEMENT

‘ದಲಿತರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿ’

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 14:08 IST
Last Updated 13 ಜುಲೈ 2021, 14:08 IST

ಬೆಂಗಳೂರು: ‘ರಾಜ್ಯ ರಾಜಕಾರಣದಲ್ಲಿ ಈವರೆಗೂ ದಲಿತರು ಮುಖ್ಯಮಂತ್ರಿ ಗಾದಿಗೆ ಏರಿಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ದಲಿತರನ್ನೇ ಮುಖ್ಯಮಂತ್ರಿ ಅಭ್ಯರ್ಥಿಗಳನ್ನಾಗಿ ಘೋಷಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

‘ಇದುವರೆಗೆ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು, ಅರಸು, ರಜಪೂತ ಹಾಗೂ ಹಿಂದುಳಿದ ವರ್ಗಗಳ ನಾಯಕರೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಶೇ 23.5 ರಷ್ಟು ಜನಸಂಖ್ಯೆ ಹೊಂದಿರುವ ದಲಿತರಿಗೆ ಈ ವಿಚಾರದಲ್ಲಿ ಅನ್ಯಾಯವಾಗಿದೆ. ಶೇ 12ರಷ್ಟು ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯವೂ ಅವಕಾಶ ವಂಚಿತವಾಗಿದೆ’ ಎಂದು ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ದಲಿತರಿಗೆ ಶೈಕ್ಷಣಿಕ, ಔ‌ದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಒದಗಿಸಿಕೊಟ್ಟಿದ್ದಾರೆ. ಈ ಸಮುದಾಯದಿಂದ 54 ಮಂದಿ ಶಾಸಕರಾಗಿದ್ದಾರೆ. 7 ಮಂದಿ ಸಂಸತ್‌ ಪ್ರವೇಶಿಸಿದ್ದಾರೆ. ಐಎಎಸ್‌, ಐಪಿಎಸ್‌ ಹಾಗೂ ಮುಖ್ಯ ಎಂಜಿನಿಯರ್‌ಗಳೂ ಸಾಕಷ್ಟು ಮಂದಿ ಇದ್ದಾರೆ. ನಮ್ಮಲ್ಲೇ ಹಲವು ಸಂಘಟನೆಗಳು ಹುಟ್ಟಿಕೊಂಡಿವೆ. ಹೀಗಿದ್ದರೂ ನಮ್ಮವರನ್ನು ಮುಖ್ಯಮಂತ್ರಿ ಗಾದಿಯಲ್ಲಿ ನೋಡಲು ಆಗಿಲ್ಲ. ಇನ್ನಾದರೂ ಈ ವಿಚಾರದಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಹೋರಾಡಬೇಕು’ ಎಂದು ಹೇಳಿದರು.

ADVERTISEMENT

‘ಮುಂದಿನ ಚುನಾವಣೆಯಲ್ಲಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಸಮುದಾಯದ ಎಲ್ಲರೂ ಪಣ ತೊಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.