ADVERTISEMENT

ದರ್ಶನ್ ಸ್ಥಳಾಂತರ: ಸೆ.2ಕ್ಕೆ ಆದೇಶ

ತಲೆದಿಂಬು, ಬೆಡ್‌ ಶಿಟ್‌ ನೀಡಲು ನಟ ಮನವಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 18:59 IST
Last Updated 30 ಆಗಸ್ಟ್ 2025, 18:59 IST
ದರ್ಶನ್, ಪವಿತ್ರಾ ಗೌಡ
ದರ್ಶನ್, ಪವಿತ್ರಾ ಗೌಡ   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಹಾಗೂ ಇತರೆ ಐವರು ಆರೋಪಿಗಳನ್ನು ಇತರೆ ಜೈಲುಗಳಿಗೆ ಸ್ಥಳಾಂತರ ಮಾಡುವ ಸಂಬಂಧ ವಿಚಾರಣೆ ನಡೆಸಿದ ಸಿಸಿಎಚ್ 64ನೇ ನ್ಯಾಯಾಲಯ ಆದೇಶವನ್ನು ಸೆಪ್ಟೆಂಬರ್ 2ಕ್ಕೆ ಕಾಯ್ದಿರಿಸಿದೆ. 

ಪರಪ್ಪನ ಅಗ್ರಹಾರದಲ್ಲಿ ವಿಶೇಷ ಆತಿಥ್ಯ ಪಡೆದಿದ್ದರಿಂದ ರಾಜ್ಯದ ಬೇರೆ ಬೇರೆ ಕಾರಾಗೃಹಕ್ಕೆ ಕೊಲೆ ಆರೋಪಿಗಳನ್ನು ಈ ಹಿಂದೆ ಸ್ಥಳಾಂತರಿಸಿ, ಜೈಲಿನ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಇದೀಗ ಮತ್ತೆ ದರ್ಶನ್, ನಾಗರಾಜ್, ಪ್ರದುಷ್, ಜಗದೀಶ್ ಹಾಗೂ ಲಕ್ಷ್ಮಣ್ ಅವರನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಬೇಕೆಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದರು.

ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು. ‘ಪ್ರಕರಣದ ವಿಚಾರಣೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪ್ರತಿ ಬಾರಿ ವಿಚಾರಣೆಗೆ ಹಾಜರುಪಡಿಸಲು ಕಷ್ಟವಾಗಲಿದೆ. ಅಲ್ಲದೇ ದರ್ಶನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಳ್ಳಾರಿಗೆ ಹೋಗಿ ಮಗನನ್ನು ನೋಡಲು ಕಷ್ಟ. ಜೊತೆಗೆ ವಕೀಲರು ಕೂಡ ಅಲ್ಲಿಗೆ ಹೋಗಲು ಕಷ್ಟವಾಗುತ್ತದೆ’ ಎಂದು ಪ್ರತಿವಾದ ಮಂಡಿಸಿದ್ದರು. ಇದರ ಜೊತೆಗೆ ಜೈಲಿನಲ್ಲಿರುವ ನಟ ದರ್ಶನ್​​ಗೆ ಬೆಡ್ ಶಿಟ್, ತಲೆದಿಂಬು ನೀಡಬೇಕೆಂದು ಮನವಿ ಮಾಡಿದರು.

ADVERTISEMENT

ಜಾಮೀನಿಗೆ ಪವಿತ್ರಾಗೌಡ ಮನವಿ: ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿ ಪವಿತ್ರಾಗೌಡ ಪರ ವಾದ ಮಂಡಿಸಿದ ಹಿರಿಯ ವಕೀಲ ಬಾಲನ್, ‘ಪ್ರಾಸಿಕ್ಯೂಷನ್ ಸಿಆರ್​​ಪಿಸಿ ಅಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ‌. ಭಾರತೀಯ ನಾಗರಿಕ ಸುರಕ್ಷ ಸಂಹಿತೆ (ಬಿಎನ್​​ಎಸ್​​​ಎಸ್) ಅಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಿತ್ತು. ಪ್ರಕರಣದ ಬಗ್ಗೆ ಕಳೆದ ವರ್ಷ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಐಪಿಸಿ ಅಡಿ ಸೆಕ್ಷನ್​​ಗಳನ್ನು ದಾಖಲಿಸಿ ಚಾರ್ಜ್ ಶೀಟ್ ಅನ್ನು ಸಿಆರ್​​​ಪಿಸಿ ಅಡಿ ಸಲ್ಲಿಕೆ ಮಾಡಿದ್ದರು. ಸಿಆರ್​​​ಪಿಸಿ ಇದೀಗ ಅಮಾನ್ಯವಾಗಿದೆ’ ಎಂದು ಹೇಳಿದರು.

ಬಿಎನ್ಎಸ್ಎಸ್ ಬಂದ ಬಳಿಕ ಹಳೆ ಸೆಕ್ಷನ್​​ಗಳಿಲ್ಲ. ಪಂಜಾಬ್, ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪು ಉಲ್ಲೇಖಿಸಿ ವಾದ ಮಂಡಿಸಿದರು. ‘ಜಾಮೀನು ಪಡೆಯಲು ನನ್ನ ಕಕ್ಷಿದಾರರು ಅರ್ಹರು. ಹಾಗಾಗಿ, ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು. ಎರಡು ಕಡೆ ವಾದ -ಪ್ರತಿ ವಾದ ಆಲಿಸಿದ ನ್ಯಾಯಾಲಯ ಸೆಪ್ಟೆಂಬರ್ 2ಕ್ಕೆ ಆದೇಶವನ್ನು ಕಾಯ್ದಿರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.