
ಅಲೋಕ್ ಕುಮಾರ್
ಬೆಂಗಳೂರು: ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿರುವ ಅಲೋಕ್‌ಕುಮಾರ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸೋಮವಾರ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಅಕ್ರಮ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜೈಲಿನ ಸಿಬ್ಬಂದಿಗೆ ಕಠಿಣ ಸಂದೇಶ ರವಾನಿಸಿದರು.
ಚೆಕ್‌ಪೋಸ್ಟ್ ಬಳಿ ಪರಿಶೀಲನೆ ನಡೆಸಿದ ಅಲೋಕ್‌ಕುಮಾರ್ ಅವರು, ಸುತ್ತಮುತ್ತಲ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಯಾವುದೇ ವಾಹನ ಬಂದರೂ ಚೆಕ್‌ಪೋಸ್ಟ್‌ನಲ್ಲೇ ತಡೆದು ಪರಿಶೀಲಿಸಿ ಪ್ರವೇಶ ಕಲ್ಪಿಸಬೇಕು. ಒಂದುವೇಳೆ ನಿಷೇಧಿತ ವಸ್ತುಗಳು ವಾಹನದಲ್ಲಿರುವುದು ಕಂಡುಬಂದರೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಪಾರ್ಕಿಂಗ್ ಸ್ಥಳದಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ಹೊರಹಾಕಿದರು. ಪಾರ್ಕಿಂಗ್ ಸ್ಥಳವನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದೂ ಸೂಚಿಸಿದರು.
ಅದಾದ ಮೇಲೆ ಕಾರಾಗೃಹಕ್ಕೆ ತೆರಳಿ, ವಿವಿಧ ಬ್ಯಾರಕ್‌ಗಳಲ್ಲಿ ಪರಿಶೀಲನೆ ನಡೆಸಿದರು. ಸಜಾಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ನೀಡಲಾಗುತ್ತಿರುವ ಊಟ ಹಾಗೂ ತಿಂಡಿ ಪರಿಶೀಲಿಸಿದರು. ಕಾರಾಗೃಹದಲ್ಲಿರುವ ಆಸ್ಪತ್ರೆಗೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಬೇಕರಿಯಲ್ಲೂ ತಪಾಸಣೆ ನಡೆಸಿದರು. ಕೈದಿಗಳಿಂದಲೂ ಕೆಲ ಮಾಹಿತಿ ಪಡೆದುಕೊಂಡರು.
ಮೊಬೈಲ್ ತರಿಸಿಕೊಂಡು ಬ್ಯಾರಕ್‌ನಲ್ಲಿ ಇಟ್ಟುಕೊಂಡು ಬಳಕೆ ಮಾಡುತ್ತಿದ್ದರೆ, ಅದನ್ನು ಸಿಬ್ಬಂದಿಗೆ ವಾಪಸ್ ನೀಡಬೇಕು ಎಂದು ಕೈದಿಗಳಿಗೂ ಸೂಚನೆ ನೀಡಿದರು.
ಅಕ್ರಮಕ್ಕೆ ಕಡಿವಾಣ: ಕಾರಾಗೃಹಕ್ಕೆ ಬೀಡಿ, ಸಿಗರೇಟ್ ತಂದುಕೊಡುವಂತಿಲ್ಲ. ಎಲ್ಲ ಅಕ್ರಮ ಚಟುವಟಿಕೆಗಳು ಬಂದ್ ಆಗಬೇಕು ಎಂದು ಅಲೋಕ್‌ಕುಮಾರ್ ಅವರು ಜೈಲಿನ ಸಿಬ್ಬಂದಿಗೆ ಸೂಚನೆ ನೀಡಿದರು.
‘ಕೈದಿಗಳು ಅನಾರೋಗ್ಯಕ್ಕೆ ಒಳಗಾದರೆ ವೈದ್ಯರು ಚಿಕಿತ್ಸೆ ಮಾತ್ರ ಕೋಡಬೇಕು. ಅದನ್ನು ಬಿಟ್ಟು ಮೊಬೈಲ್, ಗಾಂಜಾ ಸಾಗಣೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಐಜಿಪಿ ದಿವ್ಯಾ, ಡಿಸಿಪಿ ನಾರಾಯಣ, ಕಾರಾಗೃಹದ ಸೂಪರಿಂಟೆಂಡೆಂಟ್ ಅಂಶುಕುಮಾರ್, ಕಮಾಂಡರ್ ವೀರೇಶ್ ಕುಮಾರ್, ಸಹಾಯಕ ಕಮಾಂಡರ್ ಮಾದೇಶ ಹಾಜರಿದ್ದರು.
ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಬ್ಯಾರಕ್‌ಗೂ ಅಲೋಕ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು ‘ದರ್ಶನ್ ಅವರನ್ನು ಇರಿಸಲಾಗಿರುವ ಬ್ಯಾರಕ್‌ಗೂ ಭೇಟಿ ನೀಡಿ ಪ್ರಕರಣದ ವಿಚಾರಣೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಯಾವುದೇ ಕುಂದುಕೊರತೆ ಇಲ್ಲ ಎಂದು ದರ್ಶನ್ ಹೇಳಿದ್ದಾರೆ. ಆರು ಮಂದಿ ಆ ಬ್ಯಾರಕ್‌ನಲ್ಲಿ ಇದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.