ADVERTISEMENT

ಅನುಮಾನಾಸ್ಪದ ಸಾವು: ಶೌಚಾಲಯದಲ್ಲಿ ಮೃತದೇಹ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 14:29 IST
Last Updated 30 ಸೆಪ್ಟೆಂಬರ್ 2022, 14:29 IST

ಬೆಂಗಳೂರು: ದಾಸರಹಳ್ಳಿ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ಅನಿಲ್‌ಕುಮಾರ್ (24) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಶೌಚಾಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

‘ಅನಿಲ್‌ಕುಮಾರ್ ಸಾವಿನಲ್ಲಿ ಅನುಮಾನವಿರುವುದಾಗಿ ಆರೋಪಿಸಿ ತಂದೆ ಸೋಮಶೇಖರಪ್ಪ ದೂರು ನೀಡಿದ್ದಾರೆ. ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಶಿವಮೊಗ್ಗ ಜಿಲ್ಲೆಯ ಅನಿಲ್‌, ಸಿನಿಮಾ ಕಥೆಗಾರರೊಬ್ಬರ ಬಳಿ ಸಹಾಯಕರಾಗಿ ಕೆಲಸ ಮಾಡಲು 20 ದಿನಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ಉಳಿದುಕೊಂಡಿದ್ದರು. ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಕಟ್ಟಡಕ್ಕೆ ವಾಪಸು ಬರುತ್ತಿದ್ದರು. ಅದೇ ಕಟ್ಟಡದಲ್ಲಿ 8 ಯುವಕರು ಇದ್ದರು.’

ADVERTISEMENT

‘ಸೆ. 16ರಂದು ಸಂಜೆ ಶೌಚಾಲಯಕ್ಕೆ ಹೋಗಿದ್ದ ಅನಿಲ್‌ಕುಮಾರ್, ಹೊರಗೆ ಬಂದಿರಲಿಲ್ಲ. ಒಳಗಿನಿಂದ ಬಾಗಿಲು ಲಾಕ್‌ ಮಾಡಿದ್ದರಿಂದ, ಇತರೆ ಯುವಕರು ಸಹ ಶೌಚಾಲಯ ತೆರೆದಿರಲಿಲ್ಲ. ಯಾರೋ ಒಳಗಡೆ ಇರಬಹುದೆಂದು ಸುಮ್ಮನಾಗಿದ್ದರು’ ಎಂದು ತಿಳಿಸಿದರು.

‘ಪೋಷಕರು ಕರೆ ಮಾಡಿದರೂ ಅನಿಲ್‌ಕುಮಾರ್ ಕರೆ ಸ್ವೀಕರಿಸಿರಲಿಲ್ಲ. ಸೆ. 19ರಂದು ಶೌಚಾಲಯದಿಂದ ದುರ್ವಾಸನೆ ಬರಲಾರಂಭಿಸಿತ್ತು. ಸ್ಥಳಕ್ಕೆ ಹೋಗಿ ಪೋಷಕರ ಸಮ್ಮುಖದಲ್ಲಿ ಶೌಚಾಲಯದ ಬಾಗಿಲು ತೆರೆದು ನೋಡಿದಾಗ, ಮೃತದೇಹ ಕಂಡಿತು’ ಎಂದು ಹೇಳಿದರು.

‘ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಅನಿಲ್‌ಕುಮಾರ್ ಸಾವಿಗೆ ನಿಖರ ಕಾರಣವೇನು ಎಂಬುದು ಪರೀಕ್ಷೆ ವರದಿಯಿಂದ ತಿಳಿಯಬೇಕಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.