ADVERTISEMENT

ಬಡಾವಣೆಗಾಗಿ‌ ಮನೆಗಳ ನೆಲಸಮ: ತಡೆಯಲು ಹೋದ ದಾಸರಹಳ್ಳಿ ಶಾಸಕ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 8:56 IST
Last Updated 25 ಅಕ್ಟೋಬರ್ 2021, 8:56 IST
ಶಾಸಕ ಆರ್‌.ಮಂಜುನಾಥ್‌ರನ್ನು ವಶಕ್ಕೆ ಪಡೆದ ಪೊಲೀಸರು
ಶಾಸಕ ಆರ್‌.ಮಂಜುನಾಥ್‌ರನ್ನು ವಶಕ್ಕೆ ಪಡೆದ ಪೊಲೀಸರು   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಡಾ.ಕೆ.ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಪಡಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಸ್ಥಳದಲ್ಲಿ 2018ರ ಬಳಿಕ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ ಸ್ಥಳೀಯ ಶಾಸಕ ಆರ್‌.ಮಂಜುನಾಥ್‌ ಸೇರಿದಂತೆ 30ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಸೋಮಶೆಟ್ಟಿಹಳ್ಳಿಯಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ.

ಈ ಬಡಾವಣೆಗೆ ಗೊತ್ತುಪಡಿಸಿದ ಜಾಗದಲ್ಲಿ 2018ರ ಆಗಸ್ಟ್‌ ಬಳಿಕ ನಿರ್ಮಾಣವಾಗಿರುವ ಕಟ್ಟಡಗಳನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆ ತೆರವುಗೊಳಿಸುತ್ತಿದ್ದೇವೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಸೋಮಶೆಟ್ಟಿಹಳ್ಳಿ ಹಾಗೂ ಗಾಣಿಗರಹಳ್ಳಿಯಲ್ಲಿ ಒಟ್ಟು 142 ಕಟ್ಟಡಗಳು 2018ರ ಬಳಿಕ ನಿರ್ಮಾಣವಾಗಿವೆ ಎಂದು ಬಿಡಿಎ ಅಧಿಕಾರಿಗಳು ಗುರುತಿಸಿದ್ದು, ಇವುಗಳನ್ನು ಕೆಡವಲು ನಿರ್ಧರಿಸಿದ್ದರು.

ಕಟ್ಟಡ ತೆರವುಗೊಳಿಸಲು ಬಿಡಿಎ ಅಧಿಕಾರಿಗಳು ಸೋಮವಾರ ಬೆಳಿಗ್ಗೆ 10ಕ್ಕೂ ಅಧಿಕ ಜೆಸಿಬಿ ಹಾಗೂ 10 ಅಧಿಕ ಹಿಟಾಚಿ ಯಂತ್ರಗಳೊಂದಿಗೆ ಹಾಗೂ ಪೊಲೀಸ್‌ ಭದ್ರತೆಯೊಂದಿಗೆ ಸ್ಥಳಕ್ಕೆ ತೆರಳಿದ್ದರು. ಕಟ್ಟಡಗಳನ್ನು ಒಡೆಯುವುದಕ್ಕೆ ಸ್ಥಳೀಯರು ಅಡ್ಡಿಪಡಿಸಿದರು.

ADVERTISEMENT

ದಾಸರಹಳ್ಳಿ ಕ್ಷೇತ್ರದ ಶಾಸಕ ಮಂಜುನಾಥ್‌ ಅವರೂ ಸ್ಥಳಕ್ಕೆ ಧಾವಿಸಿ ಕಟ್ಟಡಗಳನ್ನು ಕೆಡಹುವುದನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳನ್ನು ಕೋರಿದರು. ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ತೆರವು ಕಾರ್ಯವನ್ನು ಕೈಗೊಂಡಿದ್ದೇವೆ. ಇದಕ್ಕೆ ಅಡ್ಡಿಪಡಿಸಬಾರದು ಎಂದು ಅಧಿಕಾರಿಗಳು ಕೋರಿದರು.

ಪ್ರತಿಭಟನೆಗೆ ಸೊಪ್ಪು ಹಾಕದೇ ಕಟ್ಟಡಗಳನ್ನು ಕೆಡವಿದರು.ಮೂರು ಮಹಡಿಯ ಒಂದು ಕಟ್ಟಡ, ಎರಡು ಮಹಡಿಯ ಮೂರು ಕಟ್ಟಡ ಮತ್ತು ಮೂರು ಶೆಡ್‌ಗಳನ್ನುಒಡೆದುಹಾಕಲಾಗಿದೆ. ಇದೆಲ್ಲವೂ ಮೂರು ವರ್ಷಗಳ ಈಚೆಗೆ ಕಟ್ಟಿಸಲಾಗಿತ್ತು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಆಗ ಸ್ಥಳೀಯರು ಶಾಸಕ ಮಂಜುನಾಥ್‌ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ಈ ಬಡಾವಣೆಗಾಗಿ ಸ್ವಾಧೀನಪಡಿಸಿಕೊಳ್ಳಬೇಕಿದ್ದ ಒಟ್ಟು 3,546 ಎಕರೆ ಭೂಮಿಯಲ್ಲಿ 257 ಎಕರೆಯನ್ನು2009–10ರ ಅವಧಿಯಲ್ಲಿ ರಾಜ್ಯ ಸರ್ಕಾರ ಕೈಬಿಡುವ ಮೂಲಕ ಭೂಮಾಲೀಕರಿಗೆ ಅನುಕೂಲ ಕಲ್ಪಿಸಿತ್ತು. ಈ ಕುರಿತು ಸಲ್ಲಿಕೆಯಾದ ಅರ್ಜಿ ವಿಲೇವಾರಿ ಮಾಡಿದ್ದ ಹೈಕೋರ್ಟ್‌ ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆಯನ್ನೇ ರದ್ದುಪಡಿಸಿತ್ತು. ಬಳಿಕ ಅನೇಕರುಬಿಡಿಎ ನಿರಾಕ್ಷೇಪಣಾ ಪತ್ರ ಪಡೆದು ಈ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದರು.

ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆಯನ್ನೇ ರದ್ದು ಮಾಡಿರುವ ಕುರಿತ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಈ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ಬಿಡಿಎಗೆ 2018ರ ಆಗಸ್ಟ್‌ 3ರಂದು ಆದೇಶ ಮಾಡಿತ್ತು. ಈ ಆದೇಶ ಪ್ರಕಟವಾದ ಬಳಿಕ ಕೆಲವರು ತರಾತುರಿಯಲ್ಲಿ ಈ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿದ್ದರು.

ಇದು ಗಮನಕ್ಕೆ ಬರುತ್ತಿದ್ದಂತೆಯೇ, 2020ರ ಡಿ.3ರಂದು ಮತ್ತೊಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್‌ ‘ನಿಯಮಾನುಸಾರ ಅನುಮತಿ ಪಡೆದು ನಿರ್ಮಾಣವಾಗಿರುವ ಮನೆಗಳಿಗೆ/ ಕಟ್ಟಡಗಳಿಗೆ ರಕ್ಷಣೆ ಒದಗಿಸಬೇಕು’ ಎಂದು ಅಭಿಪ್ರಾಯಪಟ್ಟಿತ್ತು. ಯಾವ ಕಟ್ಟಡಗಳು ಕ್ರಮಬದ್ಧವಾಗಿ ನಿರ್ಮಾಣವಾಗಿವೆ ಎಂಬುದನ್ನು ಪರಿಶೀಲಿಸಲು ನಿವೃತ್ತ ನ್ಯಾ.ಚಂದ್ರಶೇಖರ್ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಿತ್ತು. ಸಮಿತಿಯು ಸ್ಥಳೀಯರಿಂದ ದಾಖಲೆಗಳನ್ನು ಆಹ್ವಾನಿಸಿ ಅವುಗಳ ಕ್ರಮಬದ್ಧತೆಯನ್ನು ಪರಿಶೀಲಿಸುತ್ತಿದೆ. ಇನ್ನೊಂದೆಡೆ, ಬಿಡಿಎ 2018ರ ಬಳಿಕ ನಿರ್ಮಾಣವಾಗಿರುವ ಕಟ್ಟಡಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸುತ್ತಿದೆ. ಇದಕ್ಕೆ ವಿರೋಧ ವ್ಯಕ‌್ತಪಡಿಸಿರುವ ಸ್ಥಳೀಯರು, ‘ಈಗಾಗಲೇ ಇರುವ ಕಟ್ಟಡವನ್ನು ಕೆಡವಿ ಅಲ್ಲಿ ಬೇರೆಯವರಿಗೆ ನಿವೇಶನ ನೀಡುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದ್ದಾರೆ.

'ಬಿಡಿಎ ಅಧಿಕಾರಿಗಳು, ಅಕ್ರಮ ಮನೆಗಳನ್ನು ನೆಲಸಮ‌ ಮಾಡಲು ಬಂದಿದ್ದಾಗ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಯಿತು. ಹೀಗಾಗಿ, ಶಾಸಕ ಹಾಗೂ‌ ಅವರ ಬೆಂಬಲಿಗರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಮುಚ್ಚಳಿಕೆ ಬರೆಸಿಕೊಂಡು ಕೆಲ ಗಂಟೆಗಳ‌ ನಂತರ ಬಿಟ್ಟು ಕಳುಹಿಸಲಾಗುವುದು' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.