ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದುಪಡಿಸುವಂತೆ ಆಗ್ರಹಿಸಿ ಜೂನ್ 27ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸಂಯುಕ್ತ ಹೋರಾಟ–ಕರ್ನಾಟಕ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಹೋರಾಟ–ಕರ್ನಾಟಕದ ಸಂಚಾಲಕ ಬಡಗಲಪುರ ನಾಗೇಂದ್ರ, ‘ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಜೂನ್ 25ರಂದು ನಡೆದ ದೇವನಹಳ್ಳಿ ಚಲೋ ಹೋರಾಟವನ್ನು ರಾಜ್ಯ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡಿತು. ಪ್ರತಿಭಟನಾ ಸ್ಥಳದಲ್ಲಿ ನೂರಾರು ಜನ ಪೊಲೀಸರನ್ನು ನಿಯೋಜಿಸಲಾಗಿತ್ತು. ವಾಹನಗಳು ತೆರಳದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ನುಗ್ಗಿದ ಪೊಲೀಸರು, ಸಂಯುಕ್ತ ಹೋರಾಟ ಕರ್ನಾಟಕದ ಪದಾಧಿಕಾರಿಗಳು ಸೇರಿದಂತೆ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದರು’ ಎಂದು ಆರೋಪಿಸಿದರು.
ಚನ್ನರಾಯಪಟ್ಟಣ ಸೇರಿದಂತೆ 13 ಹಳ್ಳಿಗಳ 1,777 ಫಲವತ್ತಾದ ಜಮೀನನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಹೆಸರಿನಲ್ಲಿ ಭೂಸ್ವಾಧೀನಕ್ಕೆ ಬಿಜೆಪಿ ಸರ್ಕಾರ ಮುಂದಾಗಿತ್ತು. ಈ ಭೂಸ್ವಾಧೀನ ವಿರೋಧಿಸಿ ನಡೆದ ಹೋರಾಟದಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸುವ ಭರವಸೆ ನೀಡಿದ್ದರು. ಆದರೆ, ಈಗ ಈ ಭೂಸ್ವಾಧೀನ ಪ್ರಕ್ರಿಯೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಅಂತಿಮ ಅಧಿಸೂಚನೆ ಹೊರಡಿಸಿರುವುದು ಖಂಡನೀಯ. ಒಂದು ವಾರದೊಳಗೆ ಈ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.
ಸಂಯುಕ್ತ ಹೋರಾಟ–ಕರ್ನಾಟಕದ ವಿ. ನಾಗರಾಜ್, ದೇವಿ, ಮಹೇಶ್ ಪ್ರಭು, ಟಿ. ಯಶವಂತ, ನೂರ್ ಶ್ರೀಧರ್ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.