ADVERTISEMENT

ಅಪಾರ್ಟ್‍ಮೆಂಟ್‍ಗಳಲ್ಲಿ ಎಸ್‍ಟಿಪಿ ಕಡ್ಡಾಯ:ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 22:03 IST
Last Updated 21 ಸೆಪ್ಟೆಂಬರ್ 2020, 22:03 IST
ಸಿ.ಎನ್.ಅಶ್ವತ್ಥನಾರಾಯಣ
ಸಿ.ಎನ್.ಅಶ್ವತ್ಥನಾರಾಯಣ   

ಬೆಂಗಳೂರು: 'ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‍ಜಿಟಿ) ಆದೇಶದಂತೆ ಎಲ್ಲ ಅಪಾರ್ಟ್‍ಮೆಂಟ್ ಸಮುಚ್ಛಯಗಳಲ್ಲಿ ಕಡ್ಡಾಯವಾಗಿ ಒಳಚರಂಡಿ ನೀರು ಸಂಸ್ಕರಣಾ ಘಟಕಗಳನ್ನು (ಎಸ್‍ಟಿಪಿ) ಅಳವಡಿಸಬೇಕು' ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಹಸಿರು ನ್ಯಾಯಮಂಡಳಿ ಆದೇಶ ಹಾಗೂ ಪರಿಸರ ಮಾಲಿನ್ಯ ಕುರಿತಾದ ಬಿಕ್ಕಟ್ಟುಗಳನ್ನು ಕುರಿತು ಬೆಂಗಳೂರು ಅಪಾರ್ಟ್‍ಮೆಂಟ್ ಮಾಲೀಕರ ಸಂಘದ (ಬಿಎಎಫ್) ಜೊತೆಗೆ ಅವರು ಆನ್‌ಲೈನ್‌ ಮೂಲಕ ಸೋಮವಾರ ಚರ್ಚಿಸಿದರು.

'ಬೆಳ್ಳಂದೂರು ಕೆರೆ ಮಾಲಿನ್ಯದಿಂದ ಬೆಂಗಳೂರಿನ ಹಿರಿಮೆಗೆ ಪೆಟ್ಟುಬಿದ್ದಿದೆ. ಕೆರೆಯನ್ನು ಸಂರಕ್ಷಿಸಿ, ಬ್ರ್ಯಾಂಡ್ ಬೆಂಗಳೂರನ್ನು ಉಳಿಸಬೇಕಿದೆ. ಎನ್‍ಜಿಟಿ ಆದೇಶದಂತೆ ಈಗಾಗಲೇ ಎಸ್‍ಟಿಪಿ ಅಳವಡಿಸಿಕೊಂಡಿರುವ ಅಪಾರ್ಟ್‍ಮೆಂಟ್ ಸಮುಚ್ಛಯಗಳಿಗೆ ತೊಂದರೆ ಇಲ್ಲ. ಉಳಿದವರು ಶೀಘ್ರವೇ ಅಳವಡಿಸಿಕೊಳ್ಳಬೇಕು' ಎಂದರು.

ADVERTISEMENT

'ನಗರದ ಜಲಮೂಲಗಳಿಗೆ ವಿಷಕಾರಿ ಅಂಶಗಳು ಸೇರುವುದನ್ನು ತಡೆಯಬೇಕು. ಇದಕ್ಕಾಗಿ ಕೊಳಚೆ ನಿರ್ಮೂಲನಾ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎಲ್ಲ ಅಪಾರ್ಟ್‍ಮೆಂಟ್‍ಗಳ ಮಾಲೀಕರು ಕೈಜೋಡಿಸಬೇಕು. ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುತ್ತೇನೆ' ಎಂದರು.

'ಕೈಗಾರಿಕೆಗಳಿಂದ ಬೆಳ್ಳಂದೂರು ಕೆರೆಗೆ ವಿಷಕಾರಿ ಅಂಶಗಳು ಸೇರುತ್ತಿದ್ದು, ವಸತಿ ಸಮುಚ್ಛಯಗಳಿಂದ ಅಲ್ಲ. ಈ ಭಾಗದಲ್ಲಿ ಸುಮಾರು 493ಕ್ಕೂ ಹೆಚ್ಚು ಕೈಗಾರಿಕೆಗಳಿವೆ' ಎಂಬ ಅಂಶವನ್ನು ಅಪಾರ್ಟ್‍ಮೆಂಟ್ ಮಾಲೀಕರು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.