ADVERTISEMENT

ಯಲಚೇನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 19:30 IST
Last Updated 9 ಏಪ್ರಿಲ್ 2021, 19:30 IST

ಬೆಂಗಳೂರು: ಯಲಚೇನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಾಗರಾಜ್ (52) ಎಂಬುವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.

‘ಸುಬ್ರಹ್ಮಣ್ಯಪುರ ನಿವಾಸಿ ನಾಗರಾಜ್, ರಿಯಲ್ ಎಸ್ಟೇಟ್ ಏಜೆಂಟ್‌ ಆಗಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಿಲ್ದಾಣದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಡಿವಿಆರ್ ವಶಕ್ಕೆ ಪಡೆದು ಪರಶೀಲನೆ ನಡೆಸಲಾಗುತ್ತಿದೆ. ನಾಗರಾಜ್ ಅವರು ನಿಲ್ದಾಣಕ್ಕೆ ಬಂದಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಬ್ಬಂದಿಯಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಏಪ್ರಿಲ್ 4ರಂದು ನಾಗರಾಜ್, ಮೆಟ್ರೊ ನಿಲ್ದಾಣಕ್ಕೆ ಬಂದಿದ್ದರು. ಆದರೆ, ಅವರ ಬಳಿ ಮೆಟ್ರೊ ಕಾರ್ಡ್‌ ಇರಲಿಲ್ಲ. ಹೀಗಾಗಿ, ಸಿಬ್ಬಂದಿ ಒಳಗೆ ಬಿಟ್ಟಿರಲಿಲ್ಲ. ಬಳಿಕ, ನಾಗರಾಜ್ ಪ್ರವೇಶ ದ್ವಾರದಲ್ಲೇ ನಿಂತಿದ್ದರು. ಮೂತ್ರ ವಿಸರ್ಜನೆಗೆ ಹೋಗಲು ಮುಂದಾಗಿದ್ದರು. ಅದೇ ಸಂದರ್ಭದಲ್ಲೇ ನಿಲ್ದಾಣದಿಂದ ಕೆಳಗೆ ಬಿದ್ದಿದ್ದರು. ನಂತರ, ತೀವ್ರವಾಗಿ ಗಾಯಗೊಂಡು ಅಲ್ಲಿಯೇ ಅವರ ಮೃತಪಟ್ಟಿರುವ ಶಂಕೆ ಇದೆ’ ಎಂದೂ ಪೊಲೀಸರು ಹೇಳಿದರು.

‘ನಾಗರಾಜ್ ಬಿದ್ದಿರುವುದು ಯಾರಿಗೂ ಗೊತ್ತಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ ದುರ್ವಾಸನೆ ಬರಲಾರಂಭಿಸಿತ್ತು. ಸ್ವಚ್ಛತಾ ಸಿಬ್ಬಂದಿ, ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಠಾಣೆಗೆ ವಿಷಯ ತಿಳಿಸಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.