ADVERTISEMENT

ಸಮುದಾಯ ಪ್ರಾಣಿ ಪಾಲನೆ ಮಾರ್ಗಸೂಚಿ ಜಾರಿಗೆ ಗಡುವು

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸಾರ್ವಜನಿಕ, ಖಾಸಗಿ ಸಂಸ್ಥೆಗಳಲ್ಲಿ ಜ.15ರೊಳಗೆ ಅನುಷ್ಠಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 21:17 IST
Last Updated 16 ಡಿಸೆಂಬರ್ 2024, 21:17 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಮುದಾಯ ಪ್ರಾಣಿಗಳ ಪಾಲನೆಗೆ ಬಿಬಿಎಂಪಿಯ ಮಾರ್ಗಸೂಚಿಗಳನ್ನು 2025ರ ಜನವರಿ 15ರೊಳಗೆ ಅನುಷ್ಠಾನಗೊಳಿಸಿಕೊಳ್ಳಲು ಗಡುವು ವಿಧಿಸಲಾಗಿದೆ.

2024ರ ಜುಲೈನಲ್ಲಿ ಪಾಲಿಕೆ ಸಮುದಾಯ ಪ್ರಾಣಿಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಬಿಎಂಪಿ ನಿರ್ಧರಿಸಿದೆ.

ADVERTISEMENT

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960, ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು-2023 ಮತ್ತು ಹೈಕೋರ್ಟ್‌ ಆದೇಶಗಳ ಪ್ರಕಾರ, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಅನ್ವಯವಾಗುವಂತೆ, ಭಾರತೀಯ ಜೀವಜಂತು ಕಲ್ಯಾಣ ಮಂಡಳಿಯ (ಎಡಬ್ಲ್ಯುಬಿಐ) ಮಾರ್ಗಸೂಚಿಗಳನ್ನು ಸರಳೀಕೃತಗೊಳಿಸಿ ಪಾಲಿಕೆ ಮಾರ್ಗಸೂಚಿ ಪ್ರಕಟಿಸಿದೆ. ಸುಪ್ರೀಂ ಕೋರ್ಟ್‌ನ ಆದೇಶಗಳನ್ನೂ ಅಳವಡಿಸಿಕೊಳ್ಳಲಾಗಿದೆ ಎಂದು ಪಶು ಸಂಗೋಪನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ವಿಫಲವಾದ ಸಂಘ, ಸಂಸ್ಥೆಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಲು ವಲಯದ ಸಹಾಯ ನಿರ್ದೇಶಕರಿಗೆ ಸೂಚಿಸಲಾಗಿದೆ. ಪ್ರಾಣಿಗಳ ಕಾನೂನುಗಳ ಅನುಷ್ಠಾನ ಮತ್ತು ಅನುಸರಣೆ ಮಾಡಿ, ಪರಿಸರ ಸಮತೋಲನವನ್ನು ಕಾಪಾಡಬೇಕು. ನಿಸರ್ಗದಲ್ಲಿರುವ ಪ್ರತಿಯೊಂದು ಪ್ರಭೇದಕ್ಕೂ ವಿಶಿಷ್ಟವಾದ ಪಾತ್ರವಿದೆ ಎಂದಿದ್ದಾರೆ.

ಪ್ರಮುಖ ಅಂಶಗಳು

* ಸಾಕುಪ್ರಾಣಿಗಳ ನಿರ್ವಹಣೆ, ಸಮುದಾಯದ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳ ನಿಯೋಜನೆ, ಪ್ರಾಣಿಗಳ ಕಾನೂನುಗಳು ಮತ್ತು ಪ್ರಾಣಿಗಳ ಹಕ್ಕುಗಳು ಮತ್ತು ನಾಯಿ ಕಡಿತ ನಿರ್ವಹಣೆ ಬಗ್ಗೆ ನಿವಾಸಿಗಳಿಗೆ ಶಿಕ್ಷಣ ನೀಡುವುದು.

* ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು/ ಅಪಾರ್ಟ್‌ಮೆಂಟ್‌ ಮಾಲೀಕರ ಅಸೋಸಿಯೇಷನ್‌ಗಳು ಮಾರ್ಗಸೂಚಿಗಳನ್ನು ಜಾರಿ ಮಾಡಬೇಕು. 

* ಸಮುದಾಯದ ನಾಯಿಗಳು ಮತ್ತು ಬೆಕ್ಕುಗಳನ್ನು ಸ್ಥಳಾಂತರಿಸುವುದು, ಸಾಕುಪ್ರಾಣಿಗಳನ್ನು ನಿಷೇಧಿಸುವುದು, ಸಮುದಾಯದ ಫೀಡರ್‌ಗಳಿಗೆ ಕಿರುಕುಳ ನೀಡುವ ಮೂಲಕ ಪ್ರಾಣಿಗಳ ಆಹಾರ ಮತ್ತು ನೀರನ್ನು ಕಸಿದುಕೊಳ್ಳುವುದು, ನಾಯಿ ಕಡಿತದ ಸುಳ್ಳು ಪ್ರಕರಣಗಳನ್ನು ದಾಖಲಿಸುವುದು, ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಮಾರ್ಗಸೂಚಿಗಳ ಹೊರತಾಗಿಯೂ ಪ್ರಾಣಿ ಕೌರ್ಯ ಸಂಬಂಧಿಸಿದ ಸಮಸ್ಯೆಗಳ ಮೇಲೆ ಬಿಬಿಎಂಪಿ ಗಮನಹರಿಸುತ್ತದೆ.

* ಸಾರ್ವಜನಿಕ ಅಥವಾ ಖಾಸಗಿ ಕಚೇರಿಗಳು, ಟೆಕ್‌ ಪಾರ್ಕ್‌ಗಳು, ಶಾಲೆಗಳು, ಕಾಲೇಜುಗಳು,  ಉದ್ಯಾನಗಳು, ಶಾಪಿಂಗ್ ಮಾಲ್‌ಗಳು, ವಸತಿ ಕಲ್ಯಾಣ ಸಂಘಗಳು ಮತ್ತು ಅಪಾರ್ಟ್‌ಮೆಂಟ್‌ ಮಾಲೀಕರ ಸಂಘಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

* ಬಿಬಿಎಂಪಿಯ ಪಶು ಸಂಗೋಪನೆ ವಿಭಾಗದ ಇನ್‌ಸ್ಟಾಗ್ರಾಂನಿಂದ (@bbmp_animalhusbandry) ಮಾರ್ಗಸೂಚಿಗಳು ಹಾಗೂ ದಾಖಲೆಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

* ಹೆಚ್ಚಿನ ಮಾಹಿತಿಗೆ ಸಹಾಯವಾಣಿ 1533ಗೆ ಕರೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.