ADVERTISEMENT

ಕೊಂಬೆ ಬಿದ್ದು ಸ್ಕೂಟರ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 18:56 IST
Last Updated 17 ಏಪ್ರಿಲ್ 2019, 18:56 IST
ಕಿರಣ್
ಕಿರಣ್   

ಬೆಂಗಳೂರು: ಹೆಬ್ಬಾಳದ ಲುಂಬಿನಿ ಗಾರ್ಡನ್ ಬಳಿ ಬುಧವಾರ ಗಾಳಿಸಹಿತ ಮಳೆಗೆ ಮರದ ಕೊಂಬೆ ಮುರಿದು ಮೈಮೇಲೆ ಬಿದ್ದಿದ್ದರಿಂದ, ಸ್ಕೂಟರ್ ಸವಾರ ಕಿರಣ್ (27) ಎಂಬುವರು ಮೃತಪಟ್ಟಿದ್ದಾರೆ.

ಕುಣಿಗಲ್‌ನ ಕಿರಣ್, ಅಕ್ಕ–ಭಾವನ ಜತೆ ಕೆಂಪಾಪುರದ ಕಾಫಿಬೋರ್ಡ್‌ ಜಂಕ್ಷನ್ ಬಳಿ ನೆಲೆಸಿದ್ದರು. ಮರಿಯಣ್ಣನಪಾಳ್ಯದ ‘ಡಿಟಿಡಿಎಕ್ಸ್‌ ಏಜೆನ್ಸಿ’ಯಲ್ಲಿ ಕೊರಿಯರ್ ಕೆಲಸ ಮಾಡುತ್ತಿದ್ದ ಅವರು, ಸಂಜೆ 5 ಗಂಟೆ ಸುಮಾರಿಗೆ ಏಜೆನ್ಸಿಯಿಂದ ಕೊರಿಯರ್ ತೆಗೆದುಕೊಂಡು ಅಮೃತಹಳ್ಳಿ ಕಡೆಗೆ ಹೋಗುತ್ತಿದ್ದರು.

ಯೋಗೇಶ್‌ಕ್ರಾಸ್‌ನಲ್ಲಿ ತಿರುವು ಪಡೆದು ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದಾಗ, ರಸ್ತೆ ಬದಿಯ ಮರ ಮುರಿದು ಅವರ ಮೇಲೆ ಬಿದ್ದಿತು. ಇತರೆ ವಾಹನಗಳ ಸವಾರರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು ಎಂದು ಅಮೃತಹಳ್ಳಿ ಪೊಲೀಸರು ಹೇಳಿದರು.

‘ರಸ್ತೆ ಬದಿಯ ಮರಗಳು ಒಣಗಿದ್ದು, ಆಗಾಗ್ಗೆ ಕೊಂಬೆಗಳು ಮುರಿದು ಬೀಳುತ್ತಿರುವ ಬಗ್ಗೆ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ಈ ಹಿಂದೆಯೇ ದೂರು ಕೊಟ್ಟಿದ್ದರು. ಆದರೂ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹೀಗಾಗಿ, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ನಗರದಜೆ.ಸಿ.ರಸ್ತೆಯಲ್ಲಿ ನಿಂತಾಗ ಬುಧವಾರ ಸಂಜೆಯ ಮಳೆಯಲ್ಲಿ ಕಂಡ ಮಿಂಚು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.