ADVERTISEMENT

ಕೈದಿಗಳ ಸಾವು; ಸಮಿತಿ ರಚನೆಗೆ ಸೂಚನೆ

ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲು ಹೈಕೋರ್ಟ್ ಸಲಹೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 5:20 IST
Last Updated 23 ನವೆಂಬರ್ 2019, 5:20 IST
   

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಅಸಹಜವಾಗಿ ಸಾವನ್ನಪ್ಪುವ ಕೈದಿಗಳ ಕುಟುಂಬಸ್ಥರು ‘ಸಂತ್ರಸ್ತ ಪರಿಹಾರ ಯೋಜನೆಯಡಿ' ಸಲ್ಲಿಸುವ ಮನವಿಗಳನ್ನು ವಿಲೇವಾರಿ ಮಾಡಲು ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬಹುದು ಎಂದು ಹೈಕೋರ್ಟ್ ಶುಕ್ರವಾರ ಸಲಹೆ ನೀಡಿದೆ.

ಬಂದೀಖಾನೆಗಳಲ್ಲಿ ಸಂಭವಿಸುವ ‘ಅಸಹಜ ಸಾವು’ ಪ್ರಕರಣಗಳಲ್ಲಿ ಮೃತರ ಸಂಬಂಧಿತರಿಗೆ ಪರಿಹಾರ ನೀಡುವ ಯೋಜನೆ ಕುರಿತು 2017ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇ ಶದ ಮೇರೆಗೆ ರಾಜ್ಯ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸರ್ಕಾರಕ್ಕೆ ಈ ಸಲಹೆ ನೀಡಿದೆ.ಕಂದಾಯ ಇಲಾಖೆ ಹಾಗೂ ಪೊಲೀಸ್‌ಇಲಾಖೆಯ ತಲಾ ಒಬ್ಬರು ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಬಹುದು ಎಂದು ಪೀಠ ಹೇಳಿತು.

ಸಂತ್ರಸ್ತ ಪರಿಹಾರ ಯೋಜನೆಯಡಿ ಪರಿಹಾರ ನಿಗದಿ ಮತ್ತು ವಿತರಣೆಗೆ 1994ರಲ್ಲಿ ನಿಗದಿಪಡಿಸಲಾದ ಮಾಸಿಕ ₹ 15 ಸಾವಿರ ಕಾಲ್ಪನಿಕ ಆದಾಯವನ್ನು ಮಾನದಂಡವನ್ನಾಗಿ ಅನುಸರಿಸಲಾಗುತ್ತಿದೆ. ಅದರ ಬದಲಿಗೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸೂಚಿಸಿರುವ ಸೂತ್ರವನ್ನೂ ಪಾಲಿಸಬಹುದು. ಅದರಲ್ಲಿ ಮಾಸಿಕ ಆದಾಯ ಕನಿಷ್ಠ ವೇತನದ ಮೇಲೆ ನಿಗದಿಪಡಿಸಲಾಗಿದೆ. ಅದು ಕನಿಷ್ಠ ಮಾಸಿಕ ₹ 10 ಸಾವಿರ ಆಗಲಿದೆ. ಈ ಸೂತ್ರವನ್ನು ಅನೇಕ ವಿಮಾ ಕಂಪನಿಗಳು ಅಳವಡಿ ಸಿಕೊಂಡಿವೆ ಎಂದು ಪೀಠ ಹೇಳಿತು.

ADVERTISEMENT

ಪ್ರಕಟಣೆ ಹೊರಡಿಸಿ: ಅಸಹಜವಾಗಿ ಸಾವನ್ನಪ್ಪುವ ಕೈದಿಗಳ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ವ್ಯಾಪಕವಾಗಿ ಪ್ರಚಾರ ಗೊಳಿಸಲು ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. ಈ ಬಗ್ಗೆ ವಿವರವಾದ ಮಾಹಿತಿನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.