ADVERTISEMENT

ಬೃಹತ್‌ ಕಂಪನಿಗಳ ಸಾಲ ಮನ್ನಾ: ಖಂಡನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 19:40 IST
Last Updated 6 ಆಗಸ್ಟ್ 2022, 19:40 IST
   

ಬೆಂಗಳೂರು: ‘ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳು ಕಳೆದ ಐದು ಹಣಕಾಸು ವರ್ಷಗಳಲ್ಲಿ ಬೃಹತ್ ಕಂಪನಿ, ಉದ್ದಿಮೆದಾರರಿಗೆ ₹10 ಲಕ್ಷ ಕೋಟಿ ಮೊತ್ತದ ಸಾಲವನ್ನು ಯಾವ ಆಧಾರದ ಮೇಲೆ ಸಾಲ ಮನ್ನಾ ಮಾಡಿವೆ’ ಎಂದು ಸಾಮಾಜಿಕ ಹೋರಾಟಗಾರರು ಪ್ರಶ್ನಿಸಿದರು.

ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಮಾತನಾಡಿ, ‘ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮೂರು–ನಾಲ್ಕು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ಪ್ರಕಾರ ದೇಶದಲ್ಲಿ 10 ಕೋಟಿಗಿಂತ ಹೆಚ್ಚು ರೈತ ಕುಟುಂಬಗಳಿದ್ದು, ಪ್ರತಿ ಕುಟುಂಬದ ಮೇಲೆ ಸರಾಸರಿ ₹1.70 ಲಕ್ಷ ಸಾಲವಿದೆ. ಐದು ವರ್ಷಗಳಿಗೊಮ್ಮೆ ಶೇಕಡಾ 60ರಷ್ಟು ಹೆಚ್ಚಾಗಿದೆ. ನಿಜವಾದ ಸಾಲ ಮನ್ನಾಗೆ ಇವರು ಅರ್ಹರು. ಬೆಂಬಲ ಬೆಲೆ ನೀತಿ ಜಾರಿಗೊಳಿಸಿ ಕಾನೂನು ಸ್ವರೂಪ ನೀಡಬೇಕು. ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕವನ್ನು ಉಚಿತವಾಗಿ ನೀಡಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರೈತ ಮುಖಂಡ ಬಡಗಲಪುರ ನಾಗೇಂದ್ರ, ‘2014ರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ಮೋದಿ ಸರ್ಕಾರ ಬಂಡವಾಳಶಾಹಿಗಳ ಪರವಾಗಿದೆ. ಅಧಿಕಾರಕ್ಕೆ ಬಂದ 11 ತಿಂಗಳಲ್ಲಿ ಕಾರ್ಪೊರೇಟ್‌ ಕಂಪನಿಗಳ 5,147 ಕೋಟಿ ಸಾಲ ಮನ್ನಾ ಮಾಡಿರುವುದೇ ಇದಕ್ಕೆ ಸಾಕ್ಷಿ. ರೈತರ ಸಾಲ ಮನ್ನಾ ಮಾಡದೇ ಇದ್ದರೂ ಬಡ್ಡಿಯನ್ನಾದರೂಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರೈತ ಮುಖಂಡ ಚಾಮರಸ ಮಾಲಿಪಾಟೀಲ್, ‘ದೇಶದಲ್ಲಿ ರೈತರ ಬೆಳೆಗೆ ಭದ್ರತೆಯಿಲ್ಲ. ಬೆಳೆ ಬಂದರೂ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆಯ ಭದ್ರತೆಯಿಲ್ಲ. ನೈಸರ್ಗಿಕ ವಿಕೋಪದಿಂದ ಆದ ನಷ್ಟವನ್ನು ರೈತರಿಂದ ಭರಿಸಲು ಸಾಧ್ಯವಿಲ್ಲ. ಆಡಳಿತ ನಡೆಸುವವರಿಗೆ ಇದು ತಿಳಿಯುತ್ತಿಲ್ಲವೇ? ಕಾರ್ಪೊರೇಟ್‌ ಕಂಪನಿಗಳ ಸಾಲ ಮನ್ನಾ ಮಾಡುವುದು ಎಷ್ಟು ಸರಿ? ಮೊದಲು ರೈತರ ಸಾಲ ಮನ್ನಾ ಮಾಡಬೇಕು’ ಎಂದು ಹೇಳಿದರು.

ಎಎಪಿ ರಾಜ್ಯ ಘಟಕದ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಮಾತನಾಡಿದರು. ಮೈಕಲ್ ಫರ್ನಾಂಡಿಸ್‌, ಬಿ.ಗೋಪಾಲ್, ವಿ.ಗಾಯತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.