ADVERTISEMENT

ಮೃತ ರೈತರನ್ನು ಹುತಾತ್ಮರೆಂದು ಘೋಷಿಸಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:22 IST
Last Updated 27 ಮೇ 2021, 21:22 IST
   

ಬೆಂಗಳೂರು: ‘ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಆರು ತಿಂಗಳಾಗಿದ್ದು, ಪ್ರತಿಭಟನೆಯ ಸ್ಥಳದಲ್ಲಿ ಮೃತಪಟ್ಟ ಎಲ್ಲ ರೈತರನ್ನು ಹುತಾತ್ಮರೆಂದು ಘೋಷಿಸಿ, ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರುಆಗ್ರಹಿಸಿದ್ದಾರೆ.

‘ಮೃತಪಟ್ಟ ರೈತರನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಂದಿದೆ ಎಂದು ಜನ ಭಾವಿಸುತ್ತಿದ್ದಾರೆ. ಜನರ ಬೃಹತ್ ಚಳವಳಿಯನ್ನು ಈ ಮಟ್ಟದಲ್ಲಿ ನಿರ್ಲಕ್ಷಿಸಿದ ಇತಿಹಾಸ ಇಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ದೇಶದ ಆರ್ಥಿಕ ಭದ್ರತೆಯನ್ನು ನಾಶ ಮಾಡುವ ಮತ್ತು ರೈತರ, ಕಾರ್ಮಿಕರ ಪಾಲಿಗೆ ಮಾರಣಾಂತಿಕವಾಗುವ ಕಾಯ್ದೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ಕೇಂದ್ರ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ಸರ್ವಾಧಿಕಾರಿಯಲ್ಲ ಎನ್ನುವುದಾದರೆ ರೈತರೊಂದಿಗೆ ಚರ್ಚಿಸಿ ಹೋರಾಟ ಹಿಂಪಡೆಯುವಂತೆ ಮಾಡಬೇಕು. ಅದಾನಿ, ಅಂಬಾನಿ ಮತ್ತು ಕಾರ್ಪೊರೇಟ್ ಪರವಾದ ಕಾನೂನುಗಳನ್ನು ವಾಪಸು ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡಬೇಕು ಮತ್ತು ಗ್ರಾಹಕರಿಗೂ ನ್ಯಾಯಯುತ ಬೆಲೆಗಳಲ್ಲಿ ಪಡಿತರ ಸಿಗುವಂತೆ ಮಾಡಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಲೆ ಖಾತ್ರಿ ಕಾಯ್ದೆಯನ್ನು, ಗ್ರಾಹಕರಿಗೆ ನ್ಯಾಯಯುತ ಬೆಲೆಗಳ ಖಾತ್ರಿಯ ಕಾಯ್ದೆಯನ್ನು ಜಾರಿಗೊಳಿಸಬೇಕು. ಇದನ್ನು ನಿಭಾಯಿಸಲು ಸರ್ವಪಕ್ಷಗಳ, ತಜ್ಞರ, ರೈತ ಮುಖಂಡರ, ಗ್ರಾಹಕ ಪ್ರತಿನಿಧಿಗಳ ಶಾಶ್ವತ ಸಮಿತಿ ರಚಿಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.