ADVERTISEMENT

ಬೆಂಗಳೂರು: ‘ಡೀಪ್‌ ಟೆಕ್‌ ಸ್ಟಾರ್ಟ್‌ಅಪ್‌’ ಶೃಂಗಸಭೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 15:30 IST
Last Updated 15 ಸೆಪ್ಟೆಂಬರ್ 2025, 15:30 IST
<div class="paragraphs"><p>ಸ್ಟಾರ್ಟ್‌ಅಪ್‌ (ಪ್ರಾತಿನಿಧಿಕ ಚಿತ್ರ)</p></div>

ಸ್ಟಾರ್ಟ್‌ಅಪ್‌ (ಪ್ರಾತಿನಿಧಿಕ ಚಿತ್ರ)

   

ಯಲಹಂಕ: ‘ನಮ್ಮ ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳಿದ್ದರೂ ಬೆರಳೆಣಿಕೆಯಷ್ಟು ಮಾತ್ರ ಆಳವಾದ ತಂತ್ರಜ್ಞಾನವನ್ನು ಅವಲಂಬಿಸಿವೆ. ಹೀಗಾಗಿ ಸರ್ಕಾರ ಸಂಕೀರ್ಣ ತಂತ್ರಜ್ಞಾನಾಧಾರಿತ ಸ್ಟಾರ್ಟ್‌ ಅಪ್‌ಗಳ ಸ್ಥಾಪನೆಗೆ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆಯ ಅನ್ವೇಷಣಾ ಘಟಕದ (ಐಎಚ್‌ಎಫ್‌ಸಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶುತೋಷ್‌ ದತ್ತ ಶರ್ಮ ಹೇಳಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಡೀಪ್‌ ಟೆಕ್‌ ಸ್ಟಾರ್ಟ್‌ಅಪ್‌-2025’ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಕೃಷಿ, ಆರೋಗ್ಯ, ರಕ್ಷಣಾ ವಲಯ, ವಿಪತ್ತು ನಿರ್ವಹಣೆ ಮತ್ತಿತರ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಗಳನ್ನು ಹಗುರಗೊಳಿಸುವ ರೋಬೊಟಿಕ್‌ ತಂತ್ರಜ್ಞಾನದ ಸದ್ಬಳಕೆಯಾಗಬೇಕು ಎಂಬುದು ಇದರ ಉದ್ದೇಶ. ತಂತ್ರಜ್ಞಾನ ಬೋಧಿಸುವ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ನೀತಿ ನಿರೂಪಕರು ಒಟ್ಟಾಗಿ ಮುಂದೆ ಸಾಗಬೇಕು’ ಎಂದು ಸಲಹೆ ನೀಡಿದರು.

ಮದ್ರಾಸಿನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಅಶೋಕನ್‌ ಟಿ. ಮಾತನಾಡಿ, ‘ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಶಿಕ್ಷಣ ಸಂಸ್ಥೆ ಹಾಗೂ ಕೈಗಾರಿಕೋದ್ಯಮಿಗಳ ಸಹಯೋಗದಲ್ಲಿ ನಡೆಯಬೇಕು’ ಎಂದು ತಿಳಿಸಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಬೆಂಬಲದಲ್ಲಿ ಸ್ಟಾರ್ಟ್‌ಅಪ್‌ ಉತ್ಪಾದಿಸಿದ ‘ಅರ್ಜುನ’ ನ್ಯೂರೋ ರೋಬೊ ಅನ್ನು ಬಿಡುಗಡೆಗೊಳಿಸಲಾಯಿತು. ನಿಟ್ಟೆ ಶಿಕ್ಷಣಸಂಸ್ಥೆಯ ಆಡಳಿತಾಧಿಕಾರಿ ರೋಹಿತ್‌ ಪೂಂಜಾ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಸಂದೀಪ್‌ ಶಾಸ್ತ್ರಿ, ಪ್ರಾಂಶುಪಾಲ ಎಚ್‌. ಸಿ. ನಾಗರಾಜ್‌, ರೋಬೊಟಿಕ್ಸ್‌ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್‌ ವಿಭಾಗದ ಮುಖ್ಯಸ್ಥ ಪ್ರಶಾಂತ್‌ ಎನ್‌. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.