ADVERTISEMENT

ಮೆಟ್ರೊ ನಿಲ್ದಾಣಕ್ಕೆ ರಕ್ಷಣಾ ಇಲಾಖೆ ಜಾಗ: ಇಬ್ಬಲೂರು ಬಳಿ ನಿರ್ಮಾಣ

ಜಂಟಿ ಗಡಿ ಗುರುತಿಸಲು ಬಿಎಂಆರ್‌ಸಿಎಲ್‌ಗೆ ಸೂಚನೆ

ಮಂಜುನಾಥ್ ಹೆಬ್ಬಾರ್‌
Published 8 ಜುಲೈ 2022, 19:16 IST
Last Updated 8 ಜುಲೈ 2022, 19:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೆಂಗಳೂರಿನ ಹೊರವರ್ತುಲ ರಸ್ತೆಯ ಇಬ್ಬಲೂರಿನಲ್ಲಿ ಸಂಯೋಜಿತ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ರಕ್ಷಣಾ ಇಲಾಖೆಗೆ ಸೇರಿದ 2.37 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಿದೆ.

ಈ ಸಂಬಂಧ ನಿಗಮವು ರಕ್ಷಣಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ರಕ್ಷಣಾ ಇಲಾಖೆಯಿಂದ ಇನ್ನಷ್ಟೇ ಅಧಿಕೃತ ಒಪ್ಪಿಗೆ ಸಿಗಬೇಕಿದೆ. ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ರಕ್ಷಣಾ ಭೂಮಿ ಹಸ್ತಾಂತರದ ಸಂಬಂಧ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜೂನ್‌ 30ರಂದು ನಡೆದ ಸಭೆಯಲ್ಲಿ ಭೂಮಿ ಹಸ್ತಾಂತರದ ಕುರಿತು ಚರ್ಚಿಸಲಾಗಿದೆ.

‘ಸೇನೆಯ ಕೇಂದ್ರ ಕಚೇರಿಯಿಂದ ಪ್ರತಿಕ್ರಿಯೆ ಬಾರದ ಕಾರಣ ಈ ವಿಷಯದ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಭೂಸ್ವಾಧೀನಕ್ಕೆ ಮೊದಲು ರಕ್ಷಣಾ ಇಲಾಖೆ ಹಾಗೂ ಬಿಎಂಆರ್‌ಸಿಎಲ್‌ ಜತೆಗೂಡಿ ಜಂಟಿ ಗಡಿ ಗುರುತಿಸುವಿಕೆ ಮಾಡಬೇಕಿದೆ. ಆದರೆ, ಬಿಎಂಆರ್‌ಸಿಎಲ್‌ ಅಧಿಕಾರಿಗಳ ಅಲಭ್ಯತೆಯಿಂದ ಈ ಕೆಲಸ ಆಗಿಲ್ಲ. ಬಿಎಂಆರ್‌ಸಿಎಲ್ ಅಧಿಕಾರಿಗಳು ಶೀಘ್ರದಲ್ಲಿ ಜಂಟಿ ಗಡಿ ಗುರುತಿಸುವಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು’ ಎಂದು ಸಭೆಯಲ್ಲಿ ಸೂಚಿಸಲಾಗಿದೆ.

ADVERTISEMENT

ರಕ್ಷಣಾ ಇಲಾಖೆಯ ಉಪ ಕಾರ್ಯದರ್ಶಿ ಸಂಜಯ್‌ ಶರ್ಮಾ ಅವರು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಜುಲೈ 7ರಂದು ಪತ್ರ ಬರೆದು, ಜಂಟಿ ಗಡಿ ಗುರುತಿಸುವಿಕೆಯನ್ನು ನಡೆಸುವಂತೆ ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ಹೊರವರ್ತುಲ ರಸ್ತೆ– ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಡುವಿನ ಮೆಟ್ರೊ ಮಾರ್ಗ ನಿರ್ಮಾಣದ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಸರ್ಜಾಪುರ– ಹೆಬ್ಬಾಳದ ನಡುವೆ
₹15 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ 37 ಕಿಲೋ ಮೀಟರ್ ಉದ್ದದ ಮೆಟ್ರೊ ಮಾರ್ಗ ನಿರ್ಮಿಸಲಾಗುತ್ತದೆ ಎಂದು 2022–23ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪ್ರಕಟಿಸಿದ್ದರು. ಈ ಮಾರ್ಗವು ಅಗರ, ಕೋರಮಂಗಲ, ಡೇರಿ ವೃತ್ತದ ಮೂಲಕ ಹಾದುಹೋಗಲಿದೆ.

ಇಬ್ಬಲೂರು ಮೆಟ್ರೊ ನಿಲ್ದಾಣವು ಒಆರ್‌ಆರ್‌–ವಿಮಾನ ನಿಲ್ದಾಣ ಹಾಗೂ ಹೆಬ್ಬಾಳ– ಸರ್ಜಾಪುರ ಮಾರ್ಗವನ್ನು ಜೋಡಣೆ ಮಾಡಲಿದೆ. ಮೆಟ್ರೊಜಾಲಕ್ಕೆ ಮಾಸ್ಟರ್‌ಪ್ಲ್ಯಾನ್‌ ರೂಪಿಸುವಾಗಲೇ ಹೆಬ್ಬಾಳ–ಸರ್ಜಾಪುರ ಮಾರ್ಗದ ಪ್ರಸ್ತಾವ ಇತ್ತು. ಕಾರಣಾಂತರ
ಗಳಿಂದ ಅದರ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಈ ಮಾರ್ಗವು ನಗರದ ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿನ ಮೆಟ್ರೊ ಜಾಲವನ್ನು ಮತ್ತಷ್ಟು ಬಲಪಡಿಸಲಿದೆ. ಹೆಬ್ಬಾಳದಿಂದ ಕೋರಮಂಗಲ ತನಕ ಸುರಂಗ ಮಾರ್ಗ ಹಾಗೂ ಅಲ್ಲಿಂದ ಸರ್ಜಾಪುರದವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳಲಿದೆ.

ಹೆಬ್ಬಾಳ ಮತ್ತು ಸರ್ಜಾಪುರ ನಡುವಿನಮೆಟ್ರೊಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಬಿಎಂ ಆರ್‌ಸಿಎಲ್ ಈಗಾಗಲೇ ಟೆಂಡರ್‌ ಆಹ್ವಾನಿಸಿದೆ. ಡಿಪಿಆರ್ ಸಿದ್ಧಪಡಿಸಲು 8 ತಿಂಗಳ ಗಡುವು ನಿಗದಿಪಡಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.