ADVERTISEMENT

ನನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ಮರುಜೀವ

ರಕ್ಷಣಾ ಇಲಾಖೆಯಿಂದ 56,000 ಚದರ ಮೀಟರ್‌ ಜಾಗ ಪಾಲಿಕೆಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:25 IST
Last Updated 5 ಮಾರ್ಚ್ 2019, 19:25 IST
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಮೋದಿ ಗಾರ್ಡನ್‌ನಲ್ಲಿ ಮೂರೂವರೆ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿ, ಮಂಗಳವಾರವೇ ಕಾಮಗಾರಿ ಮುಕ್ತಾಯಗೊಂಡಿತು.ಪ್ರಜಾವಾಣಿ ಚಿತ್ರ
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಮೋದಿ ಗಾರ್ಡನ್‌ನಲ್ಲಿ ಮೂರೂವರೆ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿ, ಮಂಗಳವಾರವೇ ಕಾಮಗಾರಿ ಮುಕ್ತಾಯಗೊಂಡಿತು.ಪ್ರಜಾವಾಣಿ ಚಿತ್ರ   

ಬೆಂಗಳೂರು: ದಶಕಗಳಿಂದ ನಿಷೇಧಿತ ವಲಯ, ರಕ್ಷಣಾ ಜಮೀನು ಎಂಬ ಫಲಕಗಳಿಂದ ಜನರ ಸರಾಗ ಓಡಾಟಕ್ಕೆ ಅಡ್ಡಗಾಲಾಗಿದ್ದ ರಸ್ತೆಗಳು ಮಂಗಳವಾರ ಸಂಚಾರಕ್ಕೆ ಮುಕ್ತವಾದವು. ಹತ್ತಾರು ವರ್ಷಗಳಿಂದ ನಿಂತಿದ್ದ ಕಾಮಗಾರಿಗಳಿಗೆ ಮರುಚಾಲನೆ ಸಿಕ್ಕಿತು. ಹೊಸ ಕಾಮಗಾರಿಗಳು ಚಾಲನೆ ಪಡೆದುಕೊಂಡವು. ಇವುಗಳ ಉಪಯೋಗ ಪಡೆಯುವ ಜನ ಸಂತಸದ ಅಲೆಯಲ್ಲಿ ತೇಲಿದರು.

ರಕ್ಷಣಾ ಇಲಾಖೆಗೆ ಸೇರಿದ ಜಾಗದ ತಕರಾರಿನಿಂದಾಗಿ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದರೈಲ್ವೆ ಮೇಲ್ಸೇತುವೆ, ಕೆಳಸೇತುವೆ, ರಸ್ತೆ ವಿಸ್ತರಣೆ, ಹೊಸ ರಸ್ತೆ ನಿರ್ಮಾಣದ 12 ಕಾಮಗಾರಿಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ಚಾಲನೆ ನೀಡಿದರು.

ಅದರಲ್ಲಿ ಮೂಲಸೌಕರ್ಯ ಅಭಿವೃದ್ಧಿಯ 10 ಕಾಮಗಾರಿಗಳು ಹಾಗೂ ಸುರಂಗಮಾರ್ಗದಲ್ಲಿ ಎರಡು ಮೆಟ್ರೊ ನಿಲ್ದಾಣಗಳ ನಿರ್ಮಾಣವೂ ಸೇರಿದೆ. ಇಲಾಖೆಯಿಂದ ಪಡೆಯುತ್ತಿರುವ 45,165 ಚ. ಮೀ. ಜಾಗಕ್ಕೆ ಸಮ ಮೌಲ್ಯದ ಜಮೀನನ್ನು ಎರಡು ತಿಂಗಳಲ್ಲಿ ನೀಡಲು ಪಾಲಿಕೆ ಸಮ್ಮತಿಸಿದೆ.

ADVERTISEMENT

‘ರಕ್ಷಣಾ ಇಲಾಖೆಯಲ್ಲಿದ್ದ ಸಣ್ಣ ಜಾಗಗಳು ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಿವೆ ಎಂಬ ಮಾತು ಕಳೆದ ವರ್ಷದ ಆಗಸ್ಟ್‌ನಲ್ಲಿ ನನ್ನ ಗಮನಕ್ಕೆ ಬಂತು. ಅಂದಿನಿಂದ ಕಾರ್ಯಪ್ರವೃತ್ತಳಾಗಿ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿದೆ. ಬೆಂಗಳೂರಿನ ಸಂಸದರು, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಜನರಿಗೆ ಆಗುತ್ತಿದ್ದ ಅನಾನುಕೂಲತೆ ಪರಿಹರಿಸಿದ್ದೇವೆ’ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ರಾಜ್ಯ ಸರ್ಕಾರಗಳಿಗೆ ತಾರತಮ್ಯ ಮಾಡದೆ ಸಹಕಾರ ನೀಡುತ್ತದೆ. ಎಲ್ಲರೊಂದಿಗೆ, ಎಲ್ಲರ ವಿಕಾಸ (ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌) ಎಂಬ ನಮ್ಮ ಧೋರಣೆಗೆ ಈ ಕಾರ್ಯವೇ ಅತ್ಯುತ್ತಮ ಉದಾಹರಣೆ. ರಸ್ತೆ, ಸಾರ್ವಜನಿಕ ಸಾರಿಗೆ, ಕುಡಿಯುವ ನೀರು, ಶೌಚಾಲಯದಂತಹ ಮೂಲಸೌಕರ್ಯಗಳಿಲ್ಲದೆ ಯಾವುದೇ ದೇಶ ಸರ್ವ ಶಕ್ತ ಆಗಲಾರದು. ಹಾಗಾಗಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳಿಗೆ ಚಾಲನೆ ನೀಡಿ, ಬಂದ್ ಆಗಿದ್ದ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದೇವೆ’ ಎಂದರು.

ಎಚ್‌.ಡಿ.ಕುಮಾರಸ್ವಾಮಿ, ‘ದೇವೇಗೌಡರು ಕೇಂದ್ರದಲ್ಲಿದ್ದಾಗ ಬೆಂಗಳೂರಿನಲ್ಲಿನ ರಕ್ಷಣಾ ಇಲಾಖೆ ಜಮೀನನ್ನು ಮೊದಲ ಬಾರಿಗೆ ಸ್ಥಳೀಯಾಡಳಿತಕ್ಕೆ ಹಸ್ತಾಂತರ ಮಾಡಿದ್ದರು. ಈಗ ಎರಡನೆ ಬಾರಿ ಹಸ್ತಾಂತರ ಮಾಡಿ ಇತಿಹಾಸ ಸೃಷ್ಠಿಸಿದ ನಿರ್ಮಲಾ ಸೀತಾರಾಮನ್‌ ಅವರಿಗೆ ಮೈತ್ರಿ ಸರ್ಕಾರದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

**

ಮೋದಿ ಗಾರ್ಡನ್‌ ರಸ್ತೆ ಮುಕ್ತಗೊಳಿಸಿದ್ದರಿಂದ ಸುತ್ತಿಬಳಸಿ ಬರಬೇಕಿದ್ದ 7.ಕಿ.ಮೀ. ಉದ್ದದ ಮಾರ್ಗ 1 ಕಿ.ಮೀ.ಗೆ ಇಳಿಮುಖವಾಗಿದೆ. ಇದೇ ರೀತಿ ದಿನ್ನೂರು ರಸ್ತೆ ವಿಸ್ತರಣೆಗೂ ಸಹಕಾರ ನೀಡಬೇಕು.

ಅಖಂಡ ಶ್ರೀನಿವಾಸ ಮೂರ್ತಿ, ಶಾಸಕ

*

ರಕ್ಷಣಾ ಇಲಾಖೆ ಜಾಗದಲ್ಲಿನ ರಸ್ತೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಮುಂದಾಳತ್ವ ವಹಿಸಿದಾಗ, ರಕ್ಷಣಾ ಇಲಾಖೆ ನನ್ನ ಮೇಲೆ ದೂರುಗಳನ್ನು ದಾಖಲಿಸಿದೆ. ಅವುಗಳನ್ನು ವಾಪಸ್ಸು ಪಡೆಯಬೇಕೆಂದು ಕೇಳಿಕೊಳ್ಳತ್ತೇನೆ.

ಸಂಪತ್‌ರಾಜ್‌, ಪಾಲಿಕೆ ಸದಸ್ಯ

*

ಉಕ್ಕಿನ ಮಹಿಳೆಯಾದ ನಿರ್ಮಲಾ ಸೀತಾರಾಮನ್‌ ಅವರು ದೃಢ ನಿರ್ಧಾರ ತಳೆದು, ನರೇಂದ್ರ ಮೋದಿ ಅವರಿಂದ ಈ ಮೂಲಸೌಲಭ್ಯಗಳ ಕಾಣಿಕೆಗಳನ್ನು ತಂದು ಕೊಟ್ಟಿದ್ದಾರೆ.

ಪಿ.ಸಿ.ಮೋಹನ್‌, ಸಂಸದ

*

ಸುರಂಗದಲ್ಲಿನ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ

‘ನಮ್ಮ ಮೆಟ್ರೊ’ ಯೋಜನೆಯ 2ನೇ ಹಂತದಲ್ಲಿ 12 ನಿಲ್ದಾಣಗಳನ್ನು ಸುರಂಗ ಮಾರ್ಗದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಮೂರು ನಿಲ್ದಾಣಗಳು ರಕ್ಷಣಾ ಇಲಾಖೆ ಜಾಗದಲ್ಲಿ ನಿರ್ಮಾಣಗೊಳ್ಳಲಿವೆ. ಗೊಟ್ಟಿಗೆರೆ–ನಾಗವಾರ ಮಾರ್ಗದ ಎಂ.ಜಿ.ರಸ್ತೆ ಮತ್ತು ವೆಲ್ಲಾರ ಜಂಕ್ಷನ್‌ ಸುರಂಗ ನಿಲ್ದಾಣಗಳ ನಿರ್ಮಾಣಕ್ಕೆ ರಕ್ಷಣಾ ಸಚಿವೆ ಶಂಕುಸ್ಥಾಪನೆ ನೆರವೇರಿಸಿದರು.

ಇದಕ್ಕಾಗಿರಕ್ಷಣಾ ಇಲಾಖೆಯು 1,557 ಚದರ ಮೀಟರ್‌ ಜಾಗವನ್ನು ಶಾಶ್ವತವಾಗಿ ಹಾಗೂ 7,197 ಚ.ಮೀ ಜಾಗವನ್ನು ತಾತ್ಕಾಲಿಕವಾಗಿ ಮೆಟ್ರೊ ರೈಲು ನಿಗಮಕ್ಕೆ ಹಸ್ತಾಂತರಿಸಿದೆ. ಕಾಮಗಾರಿ ಮೂರು ತಿಂಗಳ ಒಳಗೆ ಆರಂಭವಾಗಲಿದೆ.

ಮೂರನೆಯ ಲ್ಯಾಂಗ್‌ಫೊರ್ಡ್‌ ಟೌನ್‌ ನಿಲ್ದಾಣದ ಕಾಮಗಾರಿಯನ್ನೂ ಆದಷ್ಟು ಬೇಗ ಶುರುಮಾಡಲು ನಿಗಮ ತಯಾರಿ ಮಾಡಿಕೊಳ್ಳುತ್ತಿದೆ.

2ನೇ ಹಂತದ ಮೆಟ್ರೊ ಮಾರ್ಗ 72.1 ಕಿ.ಮೀ. ಉದ್ದವಿರಲಿದೆ. ಇದರಲ್ಲಿ ಮೊದಲ ಹಂತದ ಕೊನೆಯ ನಿಲ್ದಾಣದ ಮಾರ್ಗಗಳ ವಿಸ್ತರಣೆ ಹಾಗೂ ಎರಡು ಹೊಸ ಮಾರ್ಗಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.