ADVERTISEMENT

ಏರೋ ಇಂಡಿಯಾ –2023: ಬೆಂಗಳೂರಿಗೆ ಬಂದಿಳಿದ ರಕ್ಷಣಾ ಸಚಿವ ರಾಜನಾಥ ಸಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2023, 10:21 IST
Last Updated 12 ಫೆಬ್ರುವರಿ 2023, 10:21 IST
ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಇಂದು ಬೆಂಗಳೂರಿಗೆ ಬಂದಿಳಿದರು (ಟ್ವಿಟರ್ ಚಿತ್ರ)
ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಇಂದು ಬೆಂಗಳೂರಿಗೆ ಬಂದಿಳಿದರು (ಟ್ವಿಟರ್ ಚಿತ್ರ)   

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಇಂದು ಬೆಂಗಳೂರಿಗೆ ಬಂದಿಳಿದಿದ್ದಾರೆ.

ಏಷ್ಯಾದ ಅತಿದೊಡ್ಡ ಏರ್‌ ಶೋ ‘ಏರೋ ಇಂಡಿಯಾ-2023’ ಸಮೀಪದ ಯಲಹಂಕ ಏರ್‌ಪೋರ್ಸ್ ಸ್ಟೇಷನ್‌ನಲ್ಲಿ ಆಯೋಜನೆಗೊಂಡಿದ್ದು, ಫೆ 13ರಿಂದ ಫೆ 17ರ ವರೆಗೂ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾಲಿನ ವೈಮಾನಿಕ ಪ್ರದರ್ಶನವನ್ನು ಸೋಮವಾರ (ಫೆ.13) ಉದ್ಘಾಟಿಸಲಿದ್ದಾರೆ.

ADVERTISEMENT

ಭಾನುವಾರ ಸಂಜೆ 7.40ಕ್ಕೆ ನಗರಕ್ಕೆ ಬರಲಿರುವ ಅವರು, ರಾಜಭವನದಲ್ಲಿ ತಂಗಲಿದ್ದಾರೆ. ಸೋಮವಾರ ಬೆಳಿಗ್ಗೆ ರಾಜಭವನದಿಂದ ಹೆಲಿಕಾಪ್ಟರ್‌ ಮೂಲಕ ಯಲಹಂಕ ವಾಯುನೆಲೆಗೆ ತೆರಳುವರು. 9.30ರಿಂದ 11.30ರವರೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ವೈಮಾನಿಕ ಪ್ರದರ್ಶನ ವೀಕ್ಷಿಸುವರು. 11.45ಕ್ಕೆ ಅಲ್ಲಿಂದಲೇ ವಾಯುಪಡೆ ವಿಮಾನದಲ್ಲಿ ತ್ರಿಪುರಾಕ್ಕೆ ತೆರಳುವರು.

ಮೇಲ್ಸೇತುವೆ ಸಂಚಾರ ಬಂದ್
ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಬಳ್ಳಾರಿ ರಸ್ತೆಯಲ್ಲಿರುವ ಎಲಿವೇಟೆಡ್ ಮೇಲ್ಸೇತುವೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಂಚಾರ ಪೊಲೀಸರು, ‘ಫೆ. 13ರಂದು ಬೆಳಿಗ್ಗೆ 8 ಗಂಟೆಯಿಂದ 11.30 ಗಂಟೆಯವರೆಗೆ ಎಸ್ಟಿಮ್‌ ಮಾಲ್‌ನಿಂದ ಯಲಹಂಕವರೆಗಿನ ಮೇಲ್ಸೇತುವೆಯಲ್ಲಿ ಸಾರ್ವಜನಿಕರ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ’ ಎಂದಿದ್ದಾರೆ.

‘ಪ್ರಧಾನ ಮಂತ್ರಿ ಹಾಗೂ ರಾಷ್ಟ್ರ–ಅಂತರರಾಷ್ಟ್ರೀಯ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರೆಲ್ಲರ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಮೇಲ್ಸೇತುವೆಯಲ್ಲಿ ಸಂಚರಿಸುವ ವಾಹನಗಳು, ಹೆಣ್ಣೂರು ವೃತ್ತದಿಂದ ಪರ್ಯಾಯ ರಸ್ತೆ ಮೂಲಕ ವಿಮಾನ ನಿಲ್ದಾಣದತ್ತ ಹೋಗಬಹುದು’ ಎಂದು ತಿಳಿಸಿದ್ದಾರೆ.

‘ಏರೋ ಇಂಡಿಯಾ ಪ್ರದರ್ಶನದ ಪಾಸ್ ಇರುವ ವಾಹನಗಳು ಯಥಾಪ್ರಕಾರ ಮೇಲ್ಸೇತುವೆಯಲ್ಲಿ ಸಂಚರಿಸಲು ಅವಕಾಶವಿದೆ’ ಎಂದೂ ಹೇಳಿದ್ದಾರೆ.

ಬಿಎಂಟಿಸಿ ಹೆಚ್ಚುವರಿ ಬಸ್‌ ಸೇವೆ
ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಬರುವ ಜನರ ಅನುಕೂಲಕ್ಕಾಗಿ ಫೆ.16 ಮತ್ತು 17ರಂದು ಬಿಎಂಟಿಸಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಿದೆ.

ಫೆ.13ರಿಂದಲೇ ವೈಮಾನಿಕ ಪ್ರದರ್ಶನ ಆರಂಭವಾಗಲಿದೆ. ಆದರೆ, ಸಾರ್ವಜನಿಕರ ವೀಕ್ಷಣೆಗೆ ಕೊನೆಯ ಎರಡು ದಿನ ಮಾತ್ರ ಅವಕಾಶ ಇರುವುದರಿಂದ ಅಂದು ಬನಶಂಕರಿ, ಕೆಂಗೇರಿ, ಪೀಣ್ಯ, ಸೆಂಟ್ರಲ್ ಸಿಲ್ಕ್ ಬೋರ್ಡ್‌, ಟಿನ್ ಫ್ಯಾಕ್ಟರಿ, ಯಶವಂತಪುರ, ಹೆಬ್ಬಾಳ, ಯಲಹಂಕ, ಕೆಂಪೇಗೌಡ ಬಸ್‌ ನಿಲ್ದಾಣದಿಂದ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ ಎಂದು ಬಿಎಂಟಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.