ಬೆಂಗಳೂರು: ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯಲ್ಲಿ (ಜೆಸ್ಕಾಂ) 199 ಮಂದಿ ಕಿರಿಯ ಪವರ್ ಮ್ಯಾನ್‌ಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಂದು ವರ್ಷವಾದರೂ ನೇಮಕಾತಿ ಪೂರ್ಣಗೊಳಿಸಿಲ್ಲ, ಬೇರೆ ಕಂಪನಿಗಳಲ್ಲಿ ನೇಮಕಾತಿ ನಡೆದಿದೆ. ಜೆಸ್ಕಾಂನಲ್ಲಿ ಮಾತ್ರ ವಿಳಂಬವಾಗಿದೆ ಎಂದು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅಭ್ಯರ್ಥಿಗಳು ಅಳಲು ತೋಡಿಕೊಂಡರು.
ಎಸ್ಎಸ್‌ಎಲ್‌ಸಿ ವಿದ್ಯಾರ್ಹತೆ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ ದೈಹಿಕ ಪರೀಕ್ಷೆ, ಶ್ರವಣದೋಷವುಳ್ಳ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಆದರೆ, ಇದುವರೆಗೂ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಿ, ಕೌನ್ಸೆಲಿಂಗ್‌ಗೆ ದಿನಾಂಕ ನಿಗದಿಪಡಿಸಿಲ್ಲ ಎಂದು ದೂರಿದರು.
ಒಟ್ಟು 2,800 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1:5ರ ಪ್ರಕಾರ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕರೆಯಲಾಗಿತ್ತು. ಇದಾಗಿ ಎರಡು ತಿಂಗಳಾಗುತ್ತಿದೆ. ಇದುವರೆಗೆ ತಾತ್ಕಾಲಿಕ ಪಟ್ಟಿಯನ್ನು ಕೂಡ ಪ್ರಕಟಿಸಿಲ್ಲ. ಸಾಮಾನ್ಯವಾಗಿ ಆರು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಯುತ್ತದೆ. ಆದರೆ, ಇಲ್ಲಿ ಒಂದು ವರ್ಷವಾದರೂ ಪೂರ್ಣ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ (ಕೆಪಿಟಿಸಿಎಲ್) ಈಗಾಗಲೇ ಪಟ್ಟಿಯನ್ನು ಪ್ರಕಟಿಸಿದ್ದು, ಇದೇ 24ರಂದು ಕೌನ್ಸೆಲಿಂಗ್ ನಿಗದಿಯಾಗಿದೆ. ಜೆಸ್ಕಾಂನವರು ಕೂಡ ಬೇಗ ಆಯ್ಕೆ ಪಟ್ಟಿ ಪ್ರಕಟಿಸಿ, ಕೌನ್ಸೆಲಿಂಗ್ ನಡೆಸಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರಿಗೆ ಕರೆ ಮಾಡಿದರೂ ಸ್ಪೀಕರಿಸಲಿಲ್ಲ.