ADVERTISEMENT

ಪರೀಕ್ಷೆ ಮುಂದೂಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 20:51 IST
Last Updated 7 ಡಿಸೆಂಬರ್ 2020, 20:51 IST
ಕೆಪಿಎಸ್‌ಸಿ
ಕೆಪಿಎಸ್‌ಸಿ   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಡಿ.21ರಿಂದ 24ರಂದು ನಡೆಸಲು ಉದ್ದೇಶಿಸಿರುವ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರ ಹುದ್ದೆಗಳ ಪರೀಕ್ಷೆ ಮುಂದೂಡಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

‘ಡಿ.22ರಂದು ಗ್ರಾಮ ಪಂಚಾಯಿತಿ ಚುನಾವಣೆಗಳು ನಿಗದಿಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದರಿಂದ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯಕ್ಕೆ ಹೋಗಬೇಕಾಗುತ್ತದೆ. ಅಭ್ಯರ್ಥಿಗಳು ಮತ್ತು ಸರ್ಕಾರಿ ನೌಕರರು ಮತದಾನದಿಂದಲೂ ವಂಚಿತರಾಗಬೇಕಾಗುತ್ತದೆ. ಪರೀಕ್ಷೆಯನ್ನು ಆಯೋಗ ಮುಂದೂಡಬೇಕು’ ಎಂದು ಅಭ್ಯರ್ಥಿ ಮಹೇಶ ಪಾವಗಡ ಒತ್ತಾಯಿಸಿದರು.

‘ಸಹಾಯಕ ನಿಯಂತ್ರಕರ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಯುವ ಈ ದಿನಾಂಕಗಳಂದೇ ಭಾರತೀಯ ಕಂಪನಿ ಕಾರ್ಯದರ್ಶಿ ಸಂಸ್ಥೆಯು ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ (ಸಿಎಸ್‌) ಹಾಗೂ ಸಿಬ್ಬಂದಿ ನೇಮಕ ಆಯೋಗದ (ಎಸ್‌ಎಸ್‌ಸಿ) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿದೆ. ನಂತರ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯು ಜ.8ರಿಂದ ‍ಪ್ರಾರಂಭವಾಗಲಿದೆ’ ಎಂದೂ ಹಲವು ಅಭ್ಯರ್ಥಿಗಳು ತಿಳಿಸಿದ್ದಾರೆ.

ADVERTISEMENT

‘ಆಯೋಗವು ಕೆಎಎಸ್‌ ಮುಖ್ಯಪರೀಕ್ಷೆಗಳನ್ನು ಮುಂದೂಡಿ ಆಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಮುಖ್ಯಮಂತ್ರಿಯವರು ಎರಡೂ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆದೇಶಿದ್ದರು. ಆದರೆ, ಆಯೋಗ ಕೆಎಎಎಸ್‌ ಮುಖ್ಯಪರೀಕ್ಷೆಯನ್ನು ಮಾತ್ರ ಮುಂದೂಡಿದೆ. ಈ ಬಗ್ಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಕಚೇರಿಗೆ ಕರೆ ಮಾಡಿದರೆ ಯಾರೂ ಸ್ವೀಕರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ಅವರಿಗೆ ಹಲವು ಬಾರಿ ಕರೆ ಮಾಡಲಾಯಿತು. ಅವರು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.