ಬೆಂಗಳೂರು: ‘ಬಲಿಜ ಸಮುದಾಯದ ಹಿತಾಸಕ್ತಿ ರಕ್ಷಿಸಲು ಕರ್ನಾಟಕ ಪ್ರದೇಶ ಬಲಿಜ ಸಂಘಕ್ಕೆ ಯಾವುದೇ ಹೊಸ ಸದಸ್ಯತ್ವ ನೀಡಬಾರದು ಎಂದು ಯಶವಂತಪುರದ ‘ನಿಸ್ವಾರ್ಥ ಬಲಿಜ ಯುವಕರು’ ಸಂಘಟನೆ ಸದಸ್ಯರು ಒತ್ತಾಯಿಸಿದ್ದಾರೆ.
‘ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಪ್ರದೇಶ ಬಲಿಜ ಸಂಘದ ಧ್ಯೇಯೋದ್ದೇಶಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ, ರಾಜಕೀಯ ಪ್ರಭಾವ ಹೊಂದಿರುವ ಪಟ್ಟಭದ್ರ ಹಿತಾಸಕ್ತಿಗಳು ಬಳಸಿಕೊಳ್ಳುತ್ತಿದ್ದಾರೆ. ಬದ್ಧತೆಯ ಕೊರತೆಯಿಂದಾಗಿ ಸಮುದಾಯದಲ್ಲಿ ತಮ್ಮ ಸ್ಥಾನಮಾನ ಕಳೆದುಕೊಂಡಿರುವವರು ಈಗ ಸದಸ್ಯತ್ವ ಪಡೆಯಲು ಮತ್ತು ಸಂಘವನ್ನು ನಿಯಂತ್ರಿಸಲು ಹಣ, ರಾಜಕೀಯ ಪ್ರಭಾವ ಬಳಸುತ್ತಿದ್ದಾರೆ. ಇಂತಹವರಿಗೆ ಅವಕಾಶ ನೀಡಬಾರದು’ ಎಂದು ಆಗ್ರಹಿಸಿದ್ದಾರೆ.
‘ಸಂಘದ ಸದಸ್ಯತ್ವದ ಅರ್ಜಿಗಳನ್ನು ಅನಧಿಕೃತವಾಗಿ ಮುದ್ರಿಸಿ, ಸದಸ್ಯತ್ವದ ಶುಲ್ಕವನ್ನು ತಾವೇ ಪಾವತಿಸುವುದಾಗಿ ಹೇಳಿಕೊಂಡು ರಾಜ್ಯದಾದ್ಯಂತ ಸಮುದಾಯದ ಮುಗ್ಧರಿಂದ ಸಹಿ ಪಡೆಯುತ್ತಿದ್ದಾರೆ. ಇದನ್ನು ಪ್ರತಿಭಟಿಸಲು, ನಾವು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಚಾಮರಾಜಪೇಟೆಯ ಶಾರದಾ ಸ್ತ್ರೀ ಸಮಾಜ ಭವನದಲ್ಲಿ ಮೇ 24ರಿಂದ ಆರಂಭಿಸಿದ್ದೇವೆ’ ಎಂದು ತಿಳಿಸಿದ್ದಾರೆ.
‘ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಲು ಸಂಘದ ಮುಖಂಡರು ಮಧ್ಯ ಪ್ರವೇಶಿಸಬೇಕು. ಹೊಸ ಸದಸ್ಯತ್ವ ನೀಡಬಾರದು’ ಎಂದು ‘ನಿಸ್ವಾರ್ಥ ಬಲಿಜ ಯುವಕರು’ ಸಂಘಟನೆಯ ಅಗರಂ ದೀಕ್ಷಿತ್, ಭರತ್, ಯಶಸ್, ಮೋಹನ್, ಗೋಪಿ ಅವರು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಕರ್ನಾಟಕ ಪ್ರದೇಶ ಬಲಿಜ ಸಂಘದ ಅಧ್ಯಕ್ಷ ಪೆರಿಕಲ್ ಸುಂದರ್, ಕಾರ್ಯದರ್ಶಿ ಸಿ.ಕೆ. ಜಗದೀಶ್, ಮಾಜಿ ಮೇಯರ್ ಪದ್ಮಾವತಿ, ಮುಖಂಡರಾದ ನವೀನ್ ಕಿರಣ್, ಮಂಜುಳಾ ನಾಯ್ಡು, ವೆಂಕಟೇಶ್, ಮಮತಾ ದೇವರಾಜ್, ಜಿ.ಎಂ. ದಿವಾಕರ್ ಅವರು ಪ್ರತಿಭಟನೆ ಸಂದರ್ಭದಲ್ಲಿ ಯುವಕರಿಗೆ ಬೆಂಬಲ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.