ADVERTISEMENT

‘ಶಕ್ತಿ’ ಬಾಕಿ ಪಾವತಿಗೆ ಕಾರ್ಮಿಕ ಸಂಘಟನೆಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 15:21 IST
Last Updated 14 ಆಗಸ್ಟ್ 2024, 15:21 IST
   

ಬೆಂಗಳೂರು: ‘ಶಕ್ತಿ’ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಸರ್ಕಾರ ನೀಡಬೇಕಿರುವ ₹1,500 ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಾರ್ಮಿಕರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯಮಟ್ಟದ ಸಮಾವೇಶ ಒತ್ತಾಯಿಸಿದೆ.

‘ಶಕ್ತಿ’ ಹಣ ಅಲ್ಲದೇ ನಿಗಮಗಳಿಗೆ ಸರ್ಕಾರವು ನೀಡಲು ಬಾಕಿ ಇರುವ ₹4,927 ಕೋಟಿಯನ್ನು ಕೂಡ ಚುಕ್ತಾ ಮಾಡಬೇಕು. ಸರಬರಾಜುದಾರರಿಗೆ ಮತ್ತು ಇಂಧನ ಬಾಕಿ ನೀಡಲು ಬಾಕಿ ಇರುವ ₹ 998 ಕೋಟಿ ಬಿಡುಗಡೆ ಮಾಡಬೇಕು. ಶಕ್ತಿ ಯೋಜನೆಯ ಹಣವನ್ನು ಪ್ರತಿ ತಿಂಗಳ ಮೊದಲನೇ ವಾರದಲ್ಲಿಯೇ ನೀಡಬೇಕು. ಪ್ರಯಾಣ ದರ ನಿರ್ಧರಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಒತ್ತಾಯಿಸಲಾಯಿತು.

ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲು ಸಾಮೂಹಿಕ ಚಳವಳಿ ನಡೆಸಲು ಸಮಾವೇಶದಲ್ಲಿ ನಿರ್ಧರಿಸಲಾಯಿತು. ಆ.27ರಂದು ಕಲಬುರಗಿಯಲ್ಲಿ, ಆ.28ರಂದು ಹುಬ್ಬಳ್ಳಿಯಲ್ಲಿ ನೌಕರರ ಸಮಾವೇಶ ನಡೆಸಲು, ಸೆಪ್ಟೆಂಬರ್‌ 12ರಂದು ರಾಜ್ಯಮಟ್ಟದಲ್ಲಿ ಒಂದು ದಿನದ ಧರಣಿ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

ADVERTISEMENT

ಸಮಾವೇಶದಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್‌, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ವಿಜಯಭಾಸ್ಕರ್‌ ಡಿ.ಎ., ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‌ನ ಎಚ್‌.ಡಿ. ರೇವಪ್ಪ, ಕೆಎಸ್‌ಆರ್‌ಟಿಸಿ ಎಸ್‌ಸಿ–ಎಸ್‌ಟಿ ಎಂಪ್ಲಾಯಿಸ್‌ ಯೂನಿಯನ್‌ನ ವೆಂಕಟರಮಣಪ್ಪ, ಕೆಎಸ್‌ಆರ್‌ಟಿಸಿ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಸಂಘದ ಸೋಮಣ್ಣ, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಜಗದೀಶ್‌ ಎಚ್‌.ಆರ್‌. ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವಿಜಯ ಭಾಸ್ಕರ್‌ ಡಿ.ಎ., ಎಚ್.ಎಸ್‌. ಮಂಜುನಾಥ್‌, ಭಾಸ್ಕರ ರಾವ್‌ ನಿರ್ಣಯ ಮಂಡಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.