ADVERTISEMENT

ಬೆಂಗಳೂರು: ಪೌರಕಾರ್ಮಿಕರ ಕಾಯಂಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜುಲೈ 2023, 21:51 IST
Last Updated 3 ಜುಲೈ 2023, 21:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಮತ್ತು ನೇರಪಾವತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿರನ್ನು ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಪೌರಕಾರ್ಮಿಕರ ಮಹಾಸಂಘ ಆಗ್ರಹಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಾರಾಯಣ, ‘ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಕಸ ವಿಲೇವಾರಿ ಮಾಡುವ ಲೋಡರ್ಸ್‌, ಕ್ಲೀನರ್ಸ್‌ ಮತ್ತು ವಾಹನ ಚಾಲಕರನ್ನು ಒಂದೇ ಬಾರಿಗೆ ಕಾಯಂಗೊಳಿಸಬೇಕು. ಕಾನೂನುಬಾಹಿರ ಹೊರಗುತ್ತಿಗೆ ಎಂಬ ಜೀತ ಪದ್ಧತಿಯಿಂದ ಮುಕ್ತಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪೌರಕಾರ್ಮಿಕರ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತವೆ
ಎಂದು ಲಿಖಿತವಾಗಿ ತಿಳಿಸಿತ್ತು. ಆದರೆ, ಸಚಿವ ಸಂಪುಟ ಸಭೆಯಲ್ಲಿ 52 ಸಾವಿರ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿತ್ತು. ಸರ್ಕಾರ ಕೇವಲ 20 ಸಾವಿರ ಕಾರ್ಮಿಕರನ್ನು ಕಾಯಂಗೊಳಿಸುವ ಸುತ್ತೋಲೆ ಹೊರಡಿಸಿ, ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿತು. ಆದರೆ, ಚುನಾವಣೆ ಘೋಷಣೆಯಾದ ಕಾರಣ ಪ್ರಕ್ರಿಯೆಗಳು ಸ್ಥಗಿತಗೊಂಡವು’ ಎಂದರು.

ADVERTISEMENT

‘2018ರಿಂದ ಇದುವರೆಗೂ ನೇರಪಾವತಿ ಅಡಿಯಲ್ಲಿ ಕಾರ್ಯನಿರ್ವಹಿಸಿ  ಅನಾರೋಗ್ಯದಿಂದ ಮೃತ
ಪಟ್ಟಿರುವ ಪೌರಕಾರ್ಮಿಕರ ಕುಟುಂಬಕ್ಕೆ ಕನಿಷ್ಠ ₹10 ಲಕ್ಷ ಪರಿಹಾರದ ಜೊತೆಗೆ ಒಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು. ಗೃಹ ಭಾಗ್ಯ ಯೋಜನೆಯ ನಿಯಮಗಳನ್ನು ತಿದ್ದುಪಡಿ ಮಾಡುವುದರ ಮೂಲಕ ಮನೆ ನಿರ್ಮಿಸಿ ಕೊಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್ ನೀಡಬೇಕು. ಕೋವಿಡ್‌ ಸಂದರ್ಭದಲ್ಲಿ ಮರಣ ಹೊಂದಿದ ಪೌರಕಾರ್ಮಿಕರ ಕುಟುಂಬಸ್ಥರಿಗೆ ಕೂಡಲೇ ಪರಿಹಾರ ನೀಡಬೇಕು’ ಎಂದು ಹೇಳಿದರು.

ಸಂಘದ ರಾಜ್ಯ ಸಂಚಾಲಕ ಕೆ.ಬಿ. ಓಬಳೇಶ, ಪ್ರಧಾನ ಕಾರ್ಯದರ್ಶಿ ಆಂಜನೇಯಲು, ಕಾರ್ಯಾಧ್ಯಕ್ಷ ಹೆಬ್ಬಾಳ ನಾಗರಾಜು, ನಗರ ಘಟಕದ ಅಧ್ಯಕ್ಷ ಮುನಿರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.