ADVERTISEMENT

ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 0:15 IST
Last Updated 13 ಆಗಸ್ಟ್ 2025, 0:15 IST
   

ಬೆಂಗಳೂರು: ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಕಾರಣಕ್ಕೆ ಸಾರಿಗೆ ನಿಗಮಗಳು 30,000 ನೌಕರರಿಗೆ ನೀಡಿರುವ ಆಪಾದನಾ ಪತ್ರ ಮತ್ತು ಕಾರಣ ಕೇಳಿರುವ ನೋಟಿಸ್‌ಗಳನ್ನು ಬೇಷರತ್ತಾಗಿ ರದ್ದು ಮಾಡಬೇಕು. ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.

ಹೈಕೋರ್ಟ್‌ನ ನಿರ್ದೇಶನದಂತೆ ಮುಷ್ಕರವನ್ನು ಕೈಬಿಟ್ಟಿದ್ದೇವೆ. ಮುಷ್ಕರ ವಿಫಲವಾಗಿದೆ ಎಂದು ಅಧಿಕಾರಿಗಳು ಭಾವಿಸಿ ನೌಕರರನ್ನು ಅಗೌರವದಿಂದ ನಡೆಸಿಕೊಳ್ಳಬಾರದು. ಮುಷ್ಕರಕ್ಕೂ ಮುಂಚೆ ಅಥವಾ ಮುಷ್ಕರದ ಸಮಯದಲ್ಲಿ ನೌಕರರ ಇಷ್ಟಕ್ಕೆ ವಿರುದ್ಧವಾಗಿ ವರ್ಗಾವಣೆ ಮಾಡಿದ್ದರೆ, ವರ್ಗಾವಣೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದೆ.

ಇತರ ಬೇಡಿಕೆಗಳನ್ನು ಆಡಳಿತ ವರ್ಗದ ಮಟ್ಟದಲ್ಲಿ ಸಂಧಾನ ನಡೆಸಿ ಬಗೆಹರಿಸಬೇಕು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ವರ್ಕರ್ಸ್‌ ಫೆಡರೇಷನ್ ಅಧ್ಯಕ್ಷ ಎಚ್‌.ವಿ. ಅನಂತಸುಬ್ಬರಾವ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಅಧ್ಯಕ್ಷ ಬಿ. ಜಯದೇವರಾಜೇ ಅರಸು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್‌ (ಸಿಐಟಿಯು) ಅಧ್ಯಕ್ಷ ಎಚ್‌.ಡಿ. ರೇವಪ್ಪ, ಕೆಎಸ್‌ಆರ್‌ಟಿಸಿ ಎಸ್‌ಸಿ, ಎಸ್‌ಟಿ ಎಂಪ್ಲಾಯಿಸ್ ಯೂನಿಯನ್‌ ಅಧ್ಯಕ್ಷ ವೆಂಕಟರಮಣಪ್ಪ, ಪರಿಶಿಷ್ಟ ಜಾತಿ/ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್‌. ಮೋಹನ್‌ರಾಜ್‌, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಜಗದೀಶ್‌ ಕೆ.ಆರ್‌. ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.