ADVERTISEMENT

ಪ್ರಸ್ತುತ ವೈಚಾರಿಕತೆ ಅಧೋಗತಿ ತಲುಪಿದೆ: ಜಿ.ರಾಮಕೃಷ್ಣ

‘ಪ್ರಜಾಪ್ರಭುತ್ವ–ಸಂವಿಧಾನ– ಒಕ್ಕೂಟ ವ್ಯವಸ್ಥೆ’ ಚಿಂತನಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:43 IST
Last Updated 8 ಸೆಪ್ಟೆಂಬರ್ 2024, 15:43 IST
ಬೆಂಗಳೂರಿನ ಗಾಂಧಿಭವನದಲ್ಲಿ ಜನ ಮನ ಪ್ರತಿಷ್ಠಾನ ಹಾಗೂ ಭಾರತ ಯಾತ್ರಾ ಕೇಂದ್ರ ಭಾನುವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವ - ಸಂವಿಧಾನ - ಒಕ್ಕೂಟ ವ್ಯವಸ್ಥೆ’ ಚಿಂತನಾ ಸಮಾವೇಶದಲ್ಲಿ ಜಾಣಗೆರೆ ವೆಂಕಟರಮಣಯ್ಯ, ಜಿ. ರಾಮಕೃಷ್ಣ ಮತ್ತು ಎ.ನಾರಾಯಣ ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ
ಬೆಂಗಳೂರಿನ ಗಾಂಧಿಭವನದಲ್ಲಿ ಜನ ಮನ ಪ್ರತಿಷ್ಠಾನ ಹಾಗೂ ಭಾರತ ಯಾತ್ರಾ ಕೇಂದ್ರ ಭಾನುವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವ - ಸಂವಿಧಾನ - ಒಕ್ಕೂಟ ವ್ಯವಸ್ಥೆ’ ಚಿಂತನಾ ಸಮಾವೇಶದಲ್ಲಿ ಜಾಣಗೆರೆ ವೆಂಕಟರಮಣಯ್ಯ, ಜಿ. ರಾಮಕೃಷ್ಣ ಮತ್ತು ಎ.ನಾರಾಯಣ ಪಾಲ್ಗೊಂಡಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪುರಾಣದ ಕಾವ್ಯ ಪುರುಷ ಶ್ರೀರಾಮನನ್ನು ದೇವರಲ್ಲ ಎಂದು ಹೇಳಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹೇಳುತ್ತಿರುವುದು ವಿಪರ್ಯಾಸದ ಸಂಗತಿ’ ಎಂದು ಚಿಂತಕ ಜಿ.ರಾಮಕೃಷ್ಣ ಅಭಿಪ್ರಾಯಪಟ್ಟರು.‌

ಜನಮನ ಪ್ರತಿಷ್ಠಾನ, ಭಾರತ ಯಾತ್ರಾ ಕೇಂದ್ರ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವ–ಸಂವಿಧಾನ– ಒಕ್ಕೂಟ ವ್ಯವಸ್ಥೆ’ ಕುರಿತ ಚಿಂತನಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕಾವ್ಯ ಪುರುಷನಾಗಿರುವ ಶ್ರೀರಾಮನನ್ನು ಇತಿಹಾಸ ಪುರುಷನನ್ನಾಗಿ ಮಾಡಿದ್ದೀರಿ. ಪ್ರಸ್ತುತ ವೈಚಾರಿಕತೆ ಎನ್ನುವುದು ಅಧೋಗತಿ ತಲುಪಿದೆ. ನಾವು ಹೇಳಿದ್ದೇ ಸಂಸ್ಕೃತಿ, ನಾವು ಮಾಡಿದ್ದೇ ಸಾಂಸ್ಕೃತಿಕ ಕೆಲಸ ಎಂದು ಜನರನ್ನು ನಂಬಿಸಲಾಗುತ್ತಿದೆ. ಇದನ್ನೇ ಎಲ್ಲರೂ ಮಾನ್ಯ ಮಾಡಬೇಕೆಂಬ ಒತ್ತಡ ಹೇರುವ ವಾತಾವರಣವಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸಂವಿಧಾನದ‌ಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದ್ದು, ಸಂವಿಧಾನ ಬದಲಾಯಿಸುವ ಹುನ್ನಾರವೂ ನಡೆಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ, ನಾವೆಲ್ಲ ಮಧ್ಯಪ್ರವೇಶಿಸಿ, ಜನ ಜಾಗೃತಿ ಮೂಡಿಸಿ, ಸಂವಿಧಾನದ ಹೂರಣದ ರಕ್ಷಣೆಗಾಗಿ ಹೋರಾಡಬೇಕಿದೆ’ ಎಂದು ಹೇಳಿದರು.

ಕನ್ನಡ ಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ, ‘1975ರಿಂದ ಒಂದೂವರೆ ವರ್ಷ ದೇಶದಲ್ಲಿದ್ದ ಘೋಷಿತ ತುರ್ತು ಪರಿಸ್ಥಿತಿಯಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಗಳಾಗಲಿಲ್ಲ. ಬದಲಿಗೆ ಒಂದಷ್ಟು ಜನಪರ ಯೋಜನೆಗಳು ಅನುಷ್ಠಾನಗೊಂಡವು. ಆದರೆ, ದೇಶದಲ್ಲಿ‌ ದಶಕದಿಂದಿರುವ ಅಘೋಷಿತ ತುರ್ತು ಪರಿಸ್ಥಿತಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ, ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಕಣಕಾರ ಎ. ನಾರಾಯಣ ಮಾತನಾಡಿ, ‘ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಹುದ್ದೆಯ ಮೇಲೆ, ಚುನಾಯಿತರಲ್ಲದ ರಾಜ್ಯಪಾಲರರನ್ನು ನೇಮಿಸುವ ಪ್ರಕ್ರಿಯೆ ಸಂವಿಧಾನದಲ್ಲಿರುವ ಅಪಭ್ರಂಶವಾಗಿದೆ. ಈ ಹುದ್ದೆಯನ್ನೇ ತೆರವುಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಈ ಸಂಬಂಧ ಚಳವಳಿ ನಡೆಯಬೇಕಿದೆ’ ಎಂದು ಪ್ರತಿಪಾದಿಸಿದರು.

‘ಸಂವಿಧಾನಕ್ಕೆ ತಿದ್ದುಪಡಿ ತರಬೇಕು’ ಎಂಬುದನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಕೆಲಸ ಶುರುವಾಗುತ್ತದೆ. ಆದ್ದರಿಂದ ಚಳವಳಿ, ಹೋರಾಟ ರೂಪಿಸುವವರು ಈ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಿದೆ’ ಎಂದು ಕಿವಿಮಾತು ಹೇಳಿದರು.

‘ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಎಂದರೆ, ಅದು ರಾಜ್ಯಗಳ ಮೇಲಿನ ದಾಳಿ ಎಂದು ಯುವ ಸಮೂಹಕ್ಕೆ ಅರಿವು ಮೂಡಿಸುವ ನುಡಿಗಟ್ಟು ನಮ್ಮಲ್ಲಿಲ್ಲ. ಈ ಬಗ್ಗೆ ತಿಳಿವಳಿಕೆ ನೀಡಲು ಚಿಂತನಾ ಸಮಾವೇಶಗಳು ಶಾಲಾ– ಕಾಲೇಜು ಮಟ್ಟದಲ್ಲಿ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಕೆ.ಎಸ್.ವಿಮಲಾ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.