ಬೆಂಗಳೂರು: ‘ಬುಧವಾರ ನಡೆಯುವ ಮುಷ್ಕರದ ಅಂಗವಾಗಿ ಮೆರವಣಿಗೆ ನಡೆಸಲು ಅನುಮತಿ ಇಲ್ಲ. ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದರೆ ಸೆಕ್ಷನ್ 107 (ಅನುಮತಿ ಪಡೆಯದೇ ಮೆರವಣಿಗೆ ನಡೆಸುವುದು) ಅಡಿ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಪೊಲೀಸ್ ಕಮಿಷನರ್ ನೀಡಿದ ಹೇಳಿಕೆಗೆ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
‘ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಕರ್ನಾಟಕ ವರ್ಕರ್ಸ್ ಯೂನಿಯನ್ ಖಂಡಿಸಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಇ.ಕೆ.ಎನ್. ರಾಜನ್, ‘ಮೆರವಣಿಗೆ ನಡೆಸಲು 15 ದಿನಗಳ ಮೊದಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದೆವು. ಆದರೆ, ಎಸಿಪಿ ಮೆರವಣಿಗೆಗೆ ಅನುಮತಿ ನೀಡಲು ನಿರಾಕರಿಸಿದ್ದರು. ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿಲ್ಲ ಎಂದು ಅವರಿಗೆ ಮನವರಿಕೆ ಮಾಡಿದ್ದೆವು’ ಎಂದು ವಿವರಿಸಿದರು.
‘ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಮೆರವಣಿಗೆ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಕಮಿನಷರ್ ದರ್ಪದಿಂದ ಹೇಳಿದ್ದಾರೆ. ಅಲ್ಲದೆ, ಮೆರವಣಿಗೆ ನಡೆಸಿದರೆ ಸಂಘಟನೆಗಳ ಮೇಲೆ ಮೊಕದ್ದಮೆ ದಾಖಲಿಸಿ, ₹10 ಲಕ್ಷದಿಂದ ₹15 ಲಕ್ಷ ದಂಡ ವಸೂಲಿ ಮಾಡುವುದಾಗಿಬಹಿರಂಗವಾಗಿ ಹೇಳಿದ್ದಾರೆ. ಈ ಕ್ರಮ ರಾಜಕೀಯ ಪ್ರೇರಿತ. ಪೂರ್ವನಿಯೋಜಿತ ರೀತಿಯಲ್ಲಿ ಮಿನರ್ವ ವೃತ್ತದಿಂದ ಬೆಳಿಗ್ಗೆ 10 ಗಂಟೆಗೆ ಕಾರ್ಮಿಕರ ಮೆರವಣಿಗೆ ರಾಜಭವನದೆಡೆಗೆ ಸಾಗಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.