ಬೆಂಗಳೂರು: ಕೃಷಿ ತಂತ್ರಜ್ಞರ ಸಂಸ್ಥೆ, `ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ, ಕ್ರಾಪ್ಸ್4ಎಚ್‌ಡಿ ಹಾಗೂ ಕೀ ಸ್ಟೋನ್ ಸಂಸ್ಥೆಗಳ ಸಹಯೋಗದಲ್ಲಿ ಜೂನ್ 14 ಮತ್ತು 15ರಂದು ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ‘ದೇಸಿ ಬೀಜೋತ್ಸವ’ವನ್ನು ಆಯೋಜಿಸಲಾಗಿದೆ.
‘ಹವಾಮಾನ ವೈಪರೀತ್ಯ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ದೇಸಿ ತಳಿಗಳಲ್ಲಿ ಇದೆ. ಕೃಷಿ ಕ್ಷೇತ್ರವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಇವುಗಳನ್ನೇ ಪರಿಹಾರವಾಗಿ ಕಂಡುಕೊಳ್ಳಲು ಚಿಂತನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದೇಸಿ ಬೀಜಗಳ ಮಹತ್ವವನ್ನು ಹೆಚ್ಚು ರೈತರಿಗೆ ತಲುಪಿಸುವ ಉದ್ದೇಶದಿಂದ ಬೀಜೋತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗದ ಸಂಚಾಲಕ ಜಿ.ಕೃಷ್ಣಪ್ರಸಾದ್ ತಿಳಿಸಿದರು.
ಎರಡು ದಿನಗಳ ಈ ಬೀಜೋತ್ಸವದಲ್ಲಿ ಕರ್ನಾಟಕದ ಜತೆಗೆ ವಿವಿಧ ರಾಜ್ಯಗಳ ಸುಮಾರು ಮುನ್ನೂರು ಬೀಜ ಸಂರಕ್ಷಕರು ಭಾಗವಹಿಸಲಿದ್ದಾರೆ. ಸಾವಿರಕ್ಕೂ ಹೆಚ್ಚು ತಳಿಗಳ ಭತ್ತ, ಸಿರಿಧಾನ್ಯ, ಬೇಳೆ ಕಾಳು, ಗೆಡ್ಡೆ ಗೆಣಸು, ಸೊಪ್ಪು, ತರಕಾರಿಗಳನ್ನು 50 ಮಳಿಗೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಹತ್ತಾರು ಪೀಳಿಗೆಯಿಂದ ಸಂರಕ್ಷಿಸುತ್ತಿರುವ ಕಾಡಿನ ಸಸ್ಯ ಸಂಪತ್ತನ್ನು ಆದಿವಾಸಿ ರೈತರ ಗುಂಪುಗಳು ಉತ್ಸವಕ್ಕೆ ತರಲಿವೆ. ಒಟ್ಟಾರೆ 1,500ಕ್ಕೂ ಹೆಚ್ಚಿನ ದೇಸಿ ತಳಿ ಬೀಜಗಳು ಪ್ರದರ್ಶನದಲ್ಲಿ ಇರಲಿವೆ ಎಂದು ಅವರು ಮಾಹಿತಿ ನೀಡಿದರು.
ಜೂನ್ 14ರಂದು ಬೆಳಿಗ್ಗೆ 10.30ಕ್ಕೆ ಭಾರತೀಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದ ಅಧ್ಯಕ್ಷ ತ್ರಿಲೋಚನ ಮಹಾಪಾತ್ರ ಬೀಜೋತ್ಸವ ಉದ್ಘಾಟಿಸಲಿದ್ದಾರೆ. ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಎ.ಬಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಬೀಜೋತ್ಸವದ ಅಂಗವಾಗಿ ಚರ್ಚೆ, ಅನುಭವ ಹಂಚಿಕೆ, ಸಂವಾದ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳಿವೆ. ಸಾಧಕ ಬೀಜ ಸಂರಕ್ಷಕರನ್ನು ಸನ್ಮಾನಿಸುವ ಜತೆಗೆ, ತಳಿ ಸಂರಕ್ಷರ ವಿವರಗಳ ಕೈಪಿಡಿ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಈಶ್ವರ್ - 99721 59714 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.