ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್) ನಡೆದಿರುವ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ, ನಿಯಮಿತದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಿ.ಎಸ್.ವೀರಯ್ಯ ಅವರ ಬ್ಯಾಂಕ್ ಖಾತೆಗೆ ಗುತ್ತಿಗೆದಾರರಿಂದ ₹3 ಕೋಟಿ ಸಂದಾಯ ಆಗಿರುವುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
2023ರ ಸೆಪ್ಟೆಂಬರ್ 23ರಂದು ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಬಂಧಿತ ಆರೋಪಿಗಳಾದ ವೀರಯ್ಯ ಹಾಗೂ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್.ಶಂಕರಪ್ಪ ಅವರು ನಡೆಸಿದ್ದ ಅಕ್ರಮಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಸಾಕ್ಷ್ಯಗಳು ಸಿಐಡಿಗೆ ಲಭಿಸಿವೆ.
‘ಅಕ್ರಮದಿಂದ ಬಂದ ಹಣದಲ್ಲಿ ವೀರಯ್ಯ ಅವರು ಕೆಂಗೇರಿ ವ್ಯಾಪ್ತಿಯ ಉಲ್ಲಾಳದಲ್ಲಿ ಒಂದು ನಿವೇಶನ ಖರೀದಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆರೋಪಿಯನ್ನು ಕಸ್ಟಡಿಗೆ ಪಡೆದು ಇನ್ನೂ ಹೆಚ್ಚಿನ ವಿಚಾರಣೆ ನಡೆಸಲಾಗುವುದು’ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘₹10 ಕೋಟಿ ಮೊತ್ತಕ್ಕೆ ತುಂಡು ಗುತ್ತಿಗೆ ನೀಡಲು ನಿಯಮದಂತೆ ಅವಕಾಶ ಇಲ್ಲ. ಆದರೂ, ತುಂಡು ಗುತ್ತಿಗೆ ನೀಡಲಾಗಿತ್ತು. ಅಲ್ಲದೇ 665 ಕಾಮಗಾರಿಗಳಲ್ಲಿ ಮೂವರು ಗುತ್ತಿಗೆದಾರರು ಮಾತ್ರ ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ, ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಲಾಗಿತ್ತು. ಅವರಿಂದ ವೀರಯ್ಯ ಹಣ ಪಡೆದುಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.
‘ಡಿಡಿಯುಟಿಟಿಎಲ್‌ನಿಂದ 2021ರಿಂದ 2023ರ ನಡುವೆ 821 ಕಾಮಗಾರಿ ನಡೆಸಲು ಅನುಮತಿ ನೀಡಲಾಗಿತ್ತು. ಅದರಲ್ಲಿ 153 ಕಾಮಗಾರಿ ಮಾತ್ರ ಮುಕ್ತಾಯವಾಗಿತ್ತು. ಉಳಿದ 668 ಕಾಮಗಾರಿಗಳನ್ನು ನಡೆಸದೇ ನಕಲಿ ಬಿಲ್ ಸೃಷ್ಟಿಸಿ ₹39.42 ಕೋಟಿಯನ್ನು ಗುತ್ತಿಗೆ ಏಜೆನ್ಸಿಗಳಿಗೆ ಬಿಡುಗಡೆ ಮಾಡಲಾಗಿತ್ತು. ಲೆಕ್ಕ ಪರಿಶೋಧನೆ ವೇಳೆ ಅಕ್ರಮ ನಡೆದಿರುವುದು ಬಯಲಾಗಿತ್ತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಮೆಸರ್ಸ್ ಎಸ್.ಎಸ್.ಎಂಟರ್ ಪ್ರೈಸಸ್, ವೆನಿಶಾ ಎಂಟರ್‌ಪ್ರೈಸಸ್, ಮಯೂರ್ ಅಡ್ವರ್ಟೈಸ್‌ಮೆಂಟ್ ಹೆಸರಿನ ಗುತ್ತಿಗೆ ಏಜೆನ್ಸಿಗಳಿಗೆ ದೊಡ್ಡ ಮೊತ್ತದ ಹಣ ಪಾವತಿಯಾಗಿದೆ. ಕಾಮಗಾರಿ ನಡೆಸದವರು ಹಂತ ಹಂತವಾಗಿ ವೀರಯ್ಯ ಅವರ ಖಾತೆಗೆ ನೇರವಾಗಿ ಹಣ ಹಾಕಿದ್ದರು. ಇದಕ್ಕೆ ಸಂಬಂಧಿಸಿದ್ದ ಎಲ್ಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.