ADVERTISEMENT

ವಿಶೇಷ ಕೌಶಲ ಬೆಳೆಸಿಕೊಂಡು ಕೆಲಸ ಮಾಡಿ: ನ್ಯಾ. ಬಿ.ಎಸ್‌. ಪಾಟೀಲ

ತರಬೇತಿ ಕಾರ್ಯಕ್ರಮದಲ್ಲಿ ಲೋಕಾಯುಕ್ತ ನ್ಯಾ. ಬಿ.ಎಸ್‌. ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 15:57 IST
Last Updated 20 ಫೆಬ್ರುವರಿ 2024, 15:57 IST
ಲೋಕಾಯುಕ್ತ ಕಚೇರಿಯಲ್ಲಿ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರದಲ್ಲಿ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ ಮಾತನಾಡಿದರು. ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಮತ್ತು ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕ ಎ. ಸುಬ್ರಮಣ್ಯೇಶ್ವರ ರಾವ್ ಉಪಸ್ಥಿತರಿದ್ದರು. –ಪ್ರಜಾವಾಣಿ ಚಿತ್ರ/
ಲೋಕಾಯುಕ್ತ ಕಚೇರಿಯಲ್ಲಿ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರದಲ್ಲಿ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ ಮಾತನಾಡಿದರು. ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಮತ್ತು ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕ ಎ. ಸುಬ್ರಮಣ್ಯೇಶ್ವರ ರಾವ್ ಉಪಸ್ಥಿತರಿದ್ದರು. –ಪ್ರಜಾವಾಣಿ ಚಿತ್ರ/   

ಬೆಂಗಳೂರು: ‘ಲೋಕಾಯುಕ್ತದಲ್ಲಿ ಇರುವವರು ಹೆದರಿಕೆ ಇಲ್ಲದೇ, ಯಾರ ಪರವಾಗಿಯೂ ಇರದೇ, ಪ್ರಾಮಾಣಿಕತೆ, ಬದ್ಧತೆ ಮತ್ತು ಕೌಶಲಪೂರ್ಣವಾಗಿ ಕೆಲಸ ಮಾಡಬೇಕು’ ಎಂದು ಲೋಕಾಯುಕ್ತ ನ್ಯಾ. ಬಿ.ಎಸ್‌. ಪಾಟೀಲ ಹೇಳಿದರು.

ಲೋಕಾಯುಕ್ತ ಅಧಿಕಾರಿಗಳಿಗೆ ನಗರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಲೋಕಾಯುಕ್ತವು ವಿಶೇಷ ತನಿಖಾ ಸಂಸ್ಥೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ವಿಶೇಷ ಕೌಶಲ ಅಗತ್ಯ. ಹಿಂದೆ ಎಸಿಬಿಯಲ್ಲಿ ಕೆಲಸ ಮಾಡಿದ್ದರಿಂದ ಇದೇನು ಮಹಾ ಎಂಬ ಉಡಾಫೆ ಬೇಡ. ಹೊಸಬರಾಗಿರುವುದರಿಂದ ಕೆಲಸ ಮಾಡಲು ಗೊತ್ತಾಗುತ್ತಿಲ್ಲ ಎಂಬ ಕೀಳರಿಮೆಯೂ ಬೇಡ. ತರಬೇತಿ ಮೂಲಕ ತಿಳಿದುಕೊಂಡು ಪರಿಶ್ರಮದಿಂದ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ಯಾವುದೇ ವಿಷಯ ತಿಳಿದುಕೊಳ್ಳುವ ಮೊದಲೇ ನಿರ್ಧಾರಕ್ಕೆ ಬರಬಾರದು. ಎಲ್ಲದಕ್ಕೂ ತೀರ್ಮಾನ ನೀಡುವ ಮನಸ್ಸು ಕಲಿಯುವಿಕೆಯ ಮೊದಲ ಶತ್ರು. ನಾವು ಎಷ್ಟು ಕೆಲಸ ಮಾಡಿದರೂ ಇಷ್ಟೇ, ನಾಲ್ಕು ಭ್ರಷ್ಟರನ್ನು ಹಿಡಿದ ಕೂಡಲೇ ಭಷ್ಟಾಚಾರ ನಿಂತು ಹೋಗುತ್ತಾ ಎಂಬ ಸಿನಿಕತನಕ್ಕೂ ಬರಬಾರದು. ಭ್ರಷ್ಟರಿಗೆ ದೊಡ್ಡವರ ಸಂಪರ್ಕ ಇದೆ, ನಾವು ಯಾಕೆ ತೊಂದರೆ ತೆಗೆದುಕೊಳ್ಳಬೇಕು ಎಂಬ ಹೆದರಿಕೆಯೂ ಇರಬಾರದು. ಎಲ್ಲೇ ಭ್ರಷ್ಟತೆ ಕಂಡರೂ ತಡೆಯುವುದೇ ನಮ್ಮ ಕೆಲಸ’ ಎಂದು ಹುರಿದುಂಬಿಸಿದರು.

‘ಬಹಳ ಉತ್ಸಾಹದಿಂದ ಪ್ರಕರಣಗಳನ್ನು ಪತ್ತೆ ಹಚ್ಚಿರುತ್ತೀರಿ. ಆದರೆ, ಸಣ್ಣ ತಾಂತ್ರಿಕ ತಪ್ಪಿನಿಂದಾಗಿ ಪ್ರಕರಣ ಬಿದ್ದು ಹೋಗುತ್ತದೆ. ತಪ್ಪಿತಸ್ಥ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾನೆ. ಹೀಗಾಗದಂತೆ ಮಾಡಬೇಕಿದ್ದರೆ ತಾಂತ್ರಿಕ ತಿಳಿವಳಿಕೆ ಮೂಡಿಸಿಕೊಳ್ಳಬೇಕು ಎಂದರು.

‘ಕರ್ನಾಟಕ ಲೋಕಾಯುಕ್ತ ಕಾಯ್ದೆ, ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಗಳಡಿ ನಾವು ಕೆಲಸ ಮಾಡುವಾಗ ನಮ್ಮ ವ್ಯಾಪ್ತಿ ಎಷ್ಟು? ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ತಿಳಿಸಿದರು.

ಉಪ ಲೋಕಾಯುಕ್ತ ನ್ಯಾ. ಕೆ.ಎನ್‌. ಫಣೀಂದ್ರ, ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಮತ್ತು ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕ ಎ. ಸುಬ್ರಮಣ್ಯೇಶ್ವರ ರಾವ್, ರಿಜಿಸ್ಟ್ರಾರ್‌ ಉಷಾರಾಣಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.