ADVERTISEMENT

ಬೆಂಗಳೂರು: ವಿವಿಧೆಡೆ ಶಿವಭಕ್ತಿಯಲ್ಲಿ ಮಿಂದೆದ್ದ ಭಕ್ತ ಸಮೂಹ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 15:58 IST
Last Updated 26 ಫೆಬ್ರುವರಿ 2025, 15:58 IST
ಅಲಂಕೃತ ಶಿವಗಂಗೆ ಗಂಗಾಧರೇಶ್ವರ ಸ್ವಾಮಿ
ಅಲಂಕೃತ ಶಿವಗಂಗೆ ಗಂಗಾಧರೇಶ್ವರ ಸ್ವಾಮಿ   

ಬೆಂಗಳೂರು: ಮಹಾಶಿವರಾತ್ರಿ ಪ್ರಯುಕ್ತ ನಗರದ ವಿವಿಧೆಡೆ ಭಕ್ತಿ ಮತ್ತು ಸಡಗರದಿಂದ ಶಿವನ ಪೂಜೆ, ಜಾಗರಣೆಗಳು ಬುಧವಾರ ನಡೆದವು.

ದಾಬಸ್ ಪೇಟೆ ವರದಿ: ಸೋಂಪುರ ಹೋಬಳಿಯ ಶಿವ ದೇವಾಲಯಗಳಲ್ಲಿ 'ಶಿವರಾತ್ರಿ' ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಓಂ ನಮಃ ಶಿವಾಯ, ಹರಹರ ಮಹದೇವ, ಶಂಭೋ ಶಂಕರ ಎಂಬ ಜಯಘೋಷ ಮಾರ್ದನಿಸಿತು. ರುದ್ರಪಠಣ, ಅಭಿಷೇಕ, ಬಿಲ್ವಪತ್ರೆ ಅಭಿಷೇಕ ಮಾಡಲಾಯಿತು.

ಶಿವಗಂಗೆಯ ಗಂಗಾಧರೇಶ್ವರ, ದಾಬಸ್ ಪೇಟೆ ಪಟ್ಟಣದ ಸೋಮೇಶ್ವರ, ದೇವರಹೊಸಹಳ್ಳಿಯ ವೀರಭದ್ರ ಸ್ವಾಮಿ, ಹಳೇನಿಜಗಲ್ಲಿನ ಉದ್ಯಾನ ವೀರಭದ್ರ, ಕರಿಮಣ್ಣೆಯ ಈಶ್ವರ ದೇವಾಲಯ, ಹೆಗ್ಗುಂದ ವೀರಭದ್ರ ದೇವಾಲಯಗಳು ತಳಿರು ತೋರಣ, ಹೂವುಗಳಿಂದ ಅಲಂಕಾರಗೊಂಡಿದ್ದವು.

ADVERTISEMENT

ಬುಧವಾರ ಬೆಳಿಗ್ಗೆ 5ಕ್ಕೆ ದೇವಾಲಯದ ಬಾಗಿಲು ತೆರೆದು ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಉಪವಾಸದ ಮೂಲಕ ಭಕ್ತಿಯಿಂದ ದೇವರ ದರ್ಶನ ಮಾಡಿದರು. ದೇವಾಲಯಗಳಲ್ಲಿ ಭಜನೆ ನಡೆಸಲಾಯಿತು. ಭಕ್ತರಿಗೆ ಹಣ್ಣಿನ ರಸಾಯನ ಪಾನಕ ಹಂಚಲಾಯಿತು

ಕೆ.ಆರ್.ಪುರ ವರದಿ: ವೆಂಗಯ್ಯನ ಕೆರೆ ಸಮೀಪದ ಇತಿಹಾಸ ಪ್ರಸಿದ್ಧ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಬುಧವಾರ ಮುಂಜಾನೆಯಿಂದಲೇ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ಪಂಚಾಮೃತ ಅಭಿಷೇಕ, ಹೋಮ ಹವನಗಳು ನಡೆದವು. ಕೆ.ಆರ್.ಪುರ, ಮೇಡಹಳ್ಳಿ, ರಾಮಮೂರ್ತಿನಗರ, ಬಾಣಸವಾಡಿ, ಹೊಸಕೋಟೆ, ಆವಲಹಳ್ಳಿ, ಅಯ್ಯಪ್ಪನಗರ ಟಿ.ಸಿ.ಪಾಳ್ಯ ಸುತ್ತಮುತ್ತಲಿನಿಂದ ಬಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು.

ಅಹೋರಾತ್ರಿ ಜಾಗರಣೆ ಪ್ರಯುಕ್ತ ಭಜನೆ, ಭಕ್ತಿಗೀತೆಗಳ ಗಾಯನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು. ದೇವಾಲಯಗಳ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಶಿವಪ್ಪ, ಪಾಲಿಕೆ ಮಾಜಿ ಸದಸ್ಯರಾದ ಪಿ.ಜೆ. ಅಂತೋಣಿಸ್ವಾಮಿ, ಶ್ರೀಕಾಂತ್, ಮುಖಂಡರಾದ ಅಮರ್ ಜ್ಯೋತಿ ಮೋಹನ್, ನವ್ಯ ಜುವೆಲ್ಲರಿ ಜಿ.ವೆಂಕಟೇಶ್ ಬಾಬು, ಕೆ.ಪಿ.ಕೃಷ್ಣ, ರವಿ ಭಾಗವಹಿಸಿದ್ದರು.

‘ಶಿವಶಕ್ತಿಯಿಂದ ಅಧ್ಯಾತ್ಮದ ಬೆಳಕು’

‘ಶಿವಶಕ್ತಿಯು ಭಕ್ತರಿಗೆ ವಿವೇಕ ನಿರ್ಭಯ ಮತ್ತು ಅಧ್ಯಾತ್ಮಕ ಬೆಳಕನ್ನು ನೀಡುತ್ತದೆ’ ಎಂದು ಕಣ್ವ ಮಠದ ವಿದ್ಯಾಕಣ್ವವಿರಾಜ ಸ್ವಾಮೀಜಿ ತಿಳಿಸಿದರು.

ಬೆಂಗಳೂರಿನ ಮಹದೇವಪುರ ಬಡಾವಣೆಯಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆದ ವಿಠ್ಠಲ ಕೃಷ್ಣನ ಸಂಸ್ಥಾನ ಪೂಜೆ ನಂತರ ಆಶೀರ್ವಚನ ನೀಡಿದರು. ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶಿವರಾತ್ರಿ ಹಿಂದುಗಳೆಲ್ಲರೂ ಒಟ್ಟಾಗಿ ಆಚರಿಸುವ ದೊಡ್ಡ ಹಬ್ಬವಾಗಿದೆ ಎಂದು ಹೇಳಿದರು. ಪಾದಪೂಜೆ ಮುದ್ರಾ ಧಾರಣ ಹರಿನಾಮ ಸ್ಮರಣೆ ಸಂಸ್ಥಾನ ಪೂಜೆ ಮಹಾಮಂಗಳಾರತಿ ನಡೆಯಿತು.

ದಿವಾನರಾದ ಸುರೇಶ್ ಕುಲಕರ್ಣಿ ಕೃಷ್ಣ ದೇಸಾಯಿ ಜಾವೂರ್ ವಿನೂತ ಜೋಶಿ ಸಂತೋಷ್ ಕುಲಕರ್ಣಿ ಲಕ್ಷ್ಮಣ ಕುಲಕರ್ಣಿ ವೆಂಕಟೇಶ್ವರ ರಾವ್ ಕೌಶಿಕ್ ಸುಧಾ ಕೌಶಿಕ್ ಶೋಭಾ ರಾಣಿ ಮೋಹನ್ ರಾವ್ ಗಿರೀಶ್ ಕೌಶಿಕ್ ಪಲ್ಲವಿ ಕೌಶಿಕ್ ನಾರಾಯಣರಾವ್ ಪದ್ಮಜಾ ನಾಗೇಂದ್ರರಾವ್ ವಾಮನ್ ರಾವ್ ಮಣಿಕಂಠ ಕರುಣಂ ಗೌತಮಿ ಶೇಷಗಿರಿ ಬಿಳಿಹಾಳ್ ರಾಘವೇಂದ್ರಾಚಾರ್ಯ ಭಾಗವಹಿಸಿದ್ದರು.

ಪೀಣ್ಯ ದಾಸರಹಳ್ಳಿ ಸಮೀಪದ ಚಿಕ್ಕಬಾಣಾವರದ ವೀರಶೈವ ಲಿಂಗಾಯತ ವೇದಿಕೆ ಕಚೇರಿಯಲ್ಲಿ ನಡೆದ ಶಿವಪೂಜೆಯ ಸಂದರ್ಭದಲ್ಲಿ ಸಮಾಜ ಸೇವಕಿ 85 ವರ್ಷದ ರುದ್ರಮ್ಮ ಅವರನ್ನು ಅಭಿನಂದಿಸಲಾಯಿತು. ಬಸವಜ್ಞಾನ ಸೆಂಟರ್ ಅಧ್ಯಕ್ಷೆ ಓಂಕಾರೇಶ್ವರಿ ವೀರಶೈವ ಲಿಂಗಾಯತ ವೇದಿಕೆ ಅಧ್ಯಕ್ಷ ಅಶೋಕ್ ಪಾಟೀಲ್ ಕಾರ್ಯದರ್ಶಿ ಎಂ.ಎಚ್. ಪಾಟೀಲ್ ಭೂಮಿಕ ಸೇವಾ ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ ಕನ್ನಡ ಸೇನೆ ಖಜಾಂಚಿ ರಾಜೇಂದ್ರ ಕೊಣ್ಣೂರ ನಿರ್ದೇಶಕರಾದ ಶಿವಣ್ಣ ವೀರಭದ್ರಪ್ಪ ಪರಮೇಶ್ ಮಲ್ಲಿಕಾರ್ಜುನ ಕೊಂಗಿ ರಾಜಪ್ಪ ಆಟೋ ಮಂಜು ಉಮಾಪತಿ ಜಿ. ರಾಜಶೇಖರ್ ರಾಜಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.