ADVERTISEMENT

ಪೊಲೀಸ್ ತಪಾಸಣೆ: ‘ಡಿಜಿ ಲಾಕರ್’, ‘ಎಂಪರಿವಾಹನ್’ ಪರಿಗಣನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 16:43 IST
Last Updated 8 ಜುಲೈ 2021, 16:43 IST

ಬೆಂಗಳೂರು: ಸಂಚಾರ ಪೊಲೀಸರ ತಪಾಸಣೆ ಸಂದರ್ಭದಲ್ಲಿ ‘ಡಿಜಿ ಲಾಕರ್‌’ ಹಾಗೂ ‘ಎಂಪರಿವಾಹನ್’ ವ್ಯವಸ್ಥೆಯಲ್ಲಿರುವ ವಿದ್ಯುನ್ಮಾನ (ಡಿಜಿಟಲ್) ರೂಪದ ದಾಖಲೆಗಳನ್ನು ತೋರಿಸಲು ಅವಕಾಶ ನೀಡಲಾಗಿದೆ.

‘ವಾಹನ ಹಾಗೂ ಚಾಲಕರಿಗೆ ಸಂಬಂಧಪಟ್ಟ ಭೌತಿಕ ದಾಖಲೆಗಳ ಬದಲಿಗೆ, ಡಿಜಿ ಲಾಕರ್ ಹಾಗೂ ಎಂಪರಿವಾಹನ್ ಆ್ಯಪ್ ಮೂಲಕ ದಾಖಲೆಗಳನ್ನು ಪೊಲೀಸರಿಗೆ ತೋರಿಸಬಹುದು’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.

‘ನೋಂದಣಿ ಪ್ರಮಾಣ ಪತ್ರ (ಆರ್‌.ಸಿ), ಚಾಲನಾ ಪರವಾನಗಿ (ಡಿ.ಎಲ್), ವಿಮೆ, ವಾಹನ ಸಾಮರ್ಥ್ಯ ಪ್ರಮಾಣ ಪತ್ರ (ಎಫ್‌.ಸಿ), ವಾಯು ಮಾಲಿನ್ಯ ತಪಾಸಣಾ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ವಿದ್ಯುನ್ಮಾನ ರೂಪದಲ್ಲಿ ಹಾಜರುಪಡಿಸಲು ಜನರಿಗೆ ಅವಕಾಶ ನೀಡಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರು ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡು ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು’ ಎಂದೂ ತಿಳಿಸಿದ್ದಾರೆ.

ADVERTISEMENT

ಏನಿದು ‘ಡಿಜಿ ಲಾಕರ್‌’ ವ್ಯವಸ್ಥೆ?: ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್) ರೂಪದಲ್ಲಿ ಸಂಗ್ರಹಿಸುವ, ವಿತರಿಸುವ ಮತ್ತು ದೃಢೀಕರಿಸುವ ವ್ಯವಸ್ಥೆಯೇ ‘ಡಿಜಿ ಲಾಕರ್‌’ (https://digilocker.gov.in).

ಕಾಗದರಹಿತ ಆಡಳಿತ ಪರಿಕಲ್ಪನೆಯ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಈ ವ್ಯವಸ್ಥೆ ರೂಪಿಸಲಾಗಿದೆ. ಜನರು ದಾಖಲೆಗಳನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನೋಡಬಹುದು ಹಾಗೂ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬಹುದು. ಇಲ್ಲಿರುವ ದಾಖಲೆಗಳು ಸ್ವಯಂ ದೃಢೀಕರಣ ಪ್ರತಿಗಳು ಇದ್ದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.