ADVERTISEMENT

‘ಡಿಎಚ್‌ ಬೆಂಗಳೂರು 2040 ಶೃಂಗ’ ಇಂದು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 19:58 IST
Last Updated 20 ಫೆಬ್ರುವರಿ 2025, 19:58 IST
ಲೋಗೊ
ಲೋಗೊ   

ಬೆಂಗಳೂರು: ನಗರದ ರೂಪುರೇಷೆಗಳನ್ನು ಆಳವಾಗಿ ವಿಶ್ಲೇಷಿಸಲು ‘ಪ್ರಜಾವಾಣಿ’ಯ ಸೋದರ ಪತ್ರಿಕೆಯಾದ ಡೆಕ್ಕನ್‌ ಹೆರಾಲ್ಡ್‌ ‘ಡಿಎಚ್‌ ಬೆಂಗಳೂರು 2040 ಶೃಂಗ’ವನ್ನು ಫೆ.21ರಂದು (ಶುಕ್ರವಾರ) ಆಯೋಜಿಸಿದೆ. ನೀತಿ ನಿರೂಪಕರು, ಕಾರ್ಪೊರೇಟ್‌ ವಲಯದ ದಿಗ್ಗಜರು, ಉದ್ಯಮಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

‘ನಾಳೆಯ ಬೆಂಗಳೂರಿನ ನಿರ್ಮಾರ್ತೃಗಳೊಂದಿಗಿನ ಭೇಟಿ’ – ಘೋಷವಾಕ್ಯದೊಂದಿಗೆ ನಡೆಯುವ ಈ ಶೃಂಗವನ್ನು ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯೂ ಮ್ಯಾರಿಯೆಟ್‌ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಶೃಂಗದಲ್ಲಿ ಬೆಳಿಗ್ಗೆ 10ರಿಂದ ಸಂಜೆಯವರೆಗೆ ವಿವಿಧ ಗೋಷ್ಠಿಗಳು ನಡೆಯಲಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಸನ್‌ ಮೊಬಿಲಿಟಿ ಅಧ್ಯಕ್ಷ ಚೇತನ್‌ ಮೈನಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. 

ADVERTISEMENT

‘ಕೃತಕ ಬುದ್ಧಿಮತ್ತೆ(ಎಐ) ಯುಗದಲ್ಲಿ ಕೆಲಸ ಮತ್ತು ಕೆಲಸದ ಸ್ಥಳಗಳ ಮರುವ್ಯಾಖ್ಯಾನ’, ‘ಭವಿಷ್ಯದ ಮೆಟ್ರೊಗಾಗಿ ಮಾನಸಿಕ ಸ್ವಾಸ್ಥ್ಯ’, ‘ನಿರ್ಮಾಣ ಬೆಂಗಳೂರು: ಆಡಳಿತ, ನಗರ ಯೋಜನೆ ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಪಾತ್ರ’, ‘ಸ್ಟಾರ್ಟ್‌–ಅಪ್‌ ರಾಜಧಾನಿಯಾಗಿ ಬೆಂಗಳೂರು ತನ್ನ ಶ್ರೇಷ್ಠತೆಯನ್ನು ಉಳಿಸಿಕೊಳ್ಳುವುದು ಹೇಗೆ?’, ‘ಭವಿಷ್ಯಕ್ಕಾಗಿ ಸ್ವಚ್ಛ ಬೆಂಗಳೂರು’, ‘ಹಸಿರು ಸಾರಿಗೆ ಕಡೆಗೆ ನಡಿಗೆ’, ‘ಬೆಂಗಳೂರಿಗೆ ಎಷ್ಟು ವಿಮಾನ ನಿಲ್ದಾಣಗಳು ಬೇಕು?’, ‘ಸಿಲಿಕಾನ್ ವ್ಯಾಲಿಯಲ್ಲಿ ಸೈಬರ್ ಅಪರಾಧವನ್ನು ನಿಭಾಯಿಸುವುದು ಹೇಗೆ?’ ಎಂಬುದು ಸೇರಿದಂತೆ ವಿವಿಧ ಗೋಷ್ಠಿಗಳು ನಡೆಯಲಿವೆ. 

ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಕುಮಾರ್‌ ಬಚ್ಚೇಗೌಡ, ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌, ಐಟಿ–ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕ ಸಿ.ಎನ್. ಅಶ್ವಥ್ ನಾರಾಯಣ್, ಶಾಸಕ ರಿಜ್ವಾನ್ ಅರ್ಷದ್ ಸಹಿತ ಅನೇಕರು ಭಾಗವಹಿಸಲಿದ್ದಾರೆ.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭೆಗೆ ಮೆರುಗು ನೀಡಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.