ADVERTISEMENT

ಧರ್ಮಸ್ಥಳ ಪ್ರಕರಣ: ರಾಜ್ಯದಾದ್ಯಂತ ಹೋರಾಟ ವಿಸ್ತರಣೆಗೆ ತೀರ್ಮಾನ

ʼಕೊಂದವರು ಯಾರುʼ ಅಡಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 18:07 IST
Last Updated 16 ಸೆಪ್ಟೆಂಬರ್ 2025, 18:07 IST
ಗಾಂಧಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಮಧುಭೂಷಣ್, ಮಲ್ಲಿಗೆ ಸಿರಿಮನೆ, ಚಂಪಾವತಿ, ಆರ್. ಸುನಂದಮ್ಮ, ಕೆ.ಎಸ್. ವಿಮಲಾ, ಎ.ಜ್ಯೋತಿ, ದು. ಸರಸ್ವತಿ, ಅಕ್ಕೈ ಪದ್ಮಶಾಲಿ ಅವರು ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದರು
ಪ್ರಜಾವಾಣಿ ಚಿತ್ರ
ಗಾಂಧಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಮಧುಭೂಷಣ್, ಮಲ್ಲಿಗೆ ಸಿರಿಮನೆ, ಚಂಪಾವತಿ, ಆರ್. ಸುನಂದಮ್ಮ, ಕೆ.ಎಸ್. ವಿಮಲಾ, ಎ.ಜ್ಯೋತಿ, ದು. ಸರಸ್ವತಿ, ಅಕ್ಕೈ ಪದ್ಮಶಾಲಿ ಅವರು ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ವರದಿಯಾಗಿರುವ ಅತ್ಯಾಚಾರ, ಕೊಲೆ, ಅನುಮಾನಾಸ್ಪದ ಸಾವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿ, ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯದಾದ್ಯಂತ ಹೋರಾಟವನ್ನು ವಿಸ್ತರಿಸಲು ನಿರ್ಧರಿಸಲಾಯಿತು.

ಮಂಗಳವಾರ ಇಲ್ಲಿ ನಡೆದ ‘ಕೊಂದವರು ಯಾರು? ನೊಂದವರೊಂದಿಗೆ ನಾವು–ನೀವು’ ಸಂವಾದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಪ್ರಕರಣಗಳ ತನಿಖೆ ವಿಚಾರವಾಗಿ ವಿಸ್ತೃತವಾಗಿ ಚರ್ಚಿಸಿ, ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು.

‘ಧರ್ಮಸ್ಥಳ ಸುತ್ತಮುತ್ತ ನಾಲ್ಕು ದಶಕದಿಂದ ವೇದವಲ್ಲಿ, ಪದ್ಮಲತಾ, ಯಮುನಾ, ಸೌಜನ್ಯ ಸೇರಿದಂತೆ ಹಲವು ಕೊಲೆ ಪ್ರಕರಣಗಳು ವರದಿಯಾಗಿವೆ. ಹೋರಾಟಗಳು ನಡೆದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ. ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆ ಕೂಡ ನೀಡಿಲ್ಲ. ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಮಹಿಳೆಯರ ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸಲು ಹೋರಾಟ ಮುಂದುವರಿಸಬೇಕು. ಇದನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಕ್ಕೂ ವಿಸ್ತರಿಸಬೇಕು’ ಎಂದು ತೀರ್ಮಾನಿಸಲಾಯಿತು.

ADVERTISEMENT

ಸಾಮಾಜಿಕ ಹೋರಾಟಗಾರ್ತಿ ಮಧುಭೂಷಣ್‌ ಮಾತನಾಡಿ, ‘ಮಹಿಳೆಯರಿಗೆ ಸುಲಭವಾಗಿ ನ್ಯಾಯ ಸಿಗುವುದಿಲ್ಲ. ಪ್ರತಿರೋಧ ಹಾಗೂ ನಿರಂತರ ಪ್ರಯತ್ನ ಮಾತ್ರ ಫಲ ನೀಡಬಲ್ಲದು. ಇದಕ್ಕೆ ಗುಜರಾತ್‌ನ ಬಿಲ್ಕಿಸ್‌ ಬಾನೊ ಪ್ರಕರಣ ಉದಾಹರಣೆ. ಸತತ ಎರಡು ದಶಕ ಕಾನೂನು ಹೋರಾಟ ಮಾಡಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಬಿಲ್ಕಿಸ್‌ ಮಾಡಿದರು. ಧರ್ಮಸ್ಥಳ ಸುತ್ತಮುತ್ತಲಿನ ಪ್ರಕರಣಗಳಲ್ಲೂ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಬೇಕು ́ ಎಂದು ಸಲಹೆ ನೀಡಿದರು.

ವಕೀಲ ಮೋಹಿತ್‌ ಕುಮಾರ್‌ ಮಾತನಾಡಿ, ‘ಧರ್ಮಸ್ಥಳ ಸುತ್ತಮುತ್ತ ಹಲವಾರು ಅನುಮಾನಾಸ್ಪದ ಸಾವಿನ ಪ್ರಕರಣಗಳು ನಡೆದಿವೆ. ನ್ಯಾಯಕ್ಕಾಗಿ ಕಾನೂನು ಹೋರಾಟಗಳನ್ನೂ ನಡೆಸಲಾಗುತ್ತಿದೆ. ಸಂತೋಷರಾವ್‌ ಅವರಂತಹ ನಿರಪರಾಧಿಗಳಿಗೆ ಶಿಕ್ಷೆಯಾಗಿದೆ. ಕರ್ನಾಟಕದಲ್ಲಿ ಪೊಲೀಸ್ ತನಿಖೆಯ ಕ್ರಮ ಒಂದು ರೀತಿಯದಾಗಿದ್ದರೆ, ಬೆಳ್ತಂಗಡಿ ಮಾದರಿಯೇ ಬೇರೆ ಇದೆ’ ಎಂದು ಹೇಳಿದರು.

ವಕೀಲೆ ಪೂರ್ಣಾ ರವಿಶಂಕರ್‌, ‘ಪ್ರಜ್ವಲ್‌ ರೇವಣ್ಣ ವಿರುದ್ದದ ಪ್ರಕರಣದಲ್ಲಿ ತನಿಖೆ ನಡೆಸಿದ ಎಸ್‌ಐಟಿ ತಂಡ ಸಹಾಯವಾಣಿಯನ್ನು ನೀಡಿತ್ತು. ಧರ್ಮಸ್ಥಳ ಪ್ರಕರಣದಲ್ಲಿ ಇದ್ಯಾವುದೂ ಆಗುತ್ತಿಲ್ಲ. ತನಿಖೆ ಪಾರದರ್ಶಕವಾಗಿ ಆಗುತ್ತದೆ ಎನ್ನುವ ವಿಶ್ವಾಸವೇ ಉಳಿದಿಲ್ಲ’ ಎಂದರು. 

ಹೆಣ್ಣು ಮಕ್ಕಳ ಸುರಕ್ಷತೆ ವಿಚಾರದಲ್ಲಿ ಸರ್ಕಾರವು ಗಂಭೀರವಾಗಿ ಯೋಚಿಸುತ್ತಿಲ್ಲ. ಕಾಡು ಹಂದಿ ಸಾಯಿಸಿದವರನ್ನು ಬಂಧಿಸಲಾಗುತ್ತದೆ. ಮಹಿಳೆಯರ ಕೊಲೆಗಾರರನ್ನು ಬಂಧಿಸಲ್ಲ ಎಂದರೆ ಹೇಗೆ?
– ಆರ್.ಸುನಂದಮ್ಮ ಹಿರಿಯ ಲೇಖಕಿ

ಐದು ಬೇಡಿಕೆಗಳೇನು?

‌1. ವಿಶೇಷ ತನಿಖಾ ತಂಡಕ್ಕೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ದಶಕಗಳಿಂದ ಬಗೆಹರಿಯದೆ ಇರುವ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಬೇಕು

2. ಸೌಜನ್ಯ ಪ್ರಕರಣದಲ್ಲಿ ಹೈಕೋರ್ಟ್ ಆದೇಶದಂತೆ ತನಿಖೆಯಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು

3. ಲಿಂಗತ್ವ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಖಾತ್ರಿಪಡಿಸಲು ಎಸ್‌ಐಟಿಯನ್ನು ಬೆಂಬಲಿಸುವ ಮಹಿಳಾ ಹಕ್ಕುಗಳ ಪರಿಣತರಿರುವ ಸ್ವತಂತ್ರ ತಂಡ ರಚಿಸಬೇಕು. ಸಾಕ್ಷಿಗಳು ಮತ್ತು ದೂರುದಾರರು ಭೀತಿ ಇಲ್ಲದೆ ದೂರು ಸಲ್ಲಿಸಲು ಅನುವಾಗುವಂತೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು

4. ಧಾರ್ಮಿಕ ಕೇಂದ್ರಗಳು ಒಳಗೊಂಡಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ನಿಯಮಗಳನ್ನು ರೂಪಿಸಬೇಕು

5. ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆಯನ್ನು ತಡೆಗಟ್ಟಲು ಶಿಫಾರಸುಗಳನ್ನು ಮಾಡಿರುವ ಉಗ್ರಪ್ಪ ಸಮಿತಿ ವರದಿ ಮತ್ತು ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಪರಿಣತರ ಸಮಿತಿ ರಚಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.