ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿರುವ ಧರ್ಮಸ್ಥಳ ಪ್ರಕರಣದ ತನಿಖೆ ತಾರ್ಕಿಕ ಅಂತ್ಯ ಕಾಣುವುದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ತಿಳಿಸಿದರು.
ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತನಿಖೆಯಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿದ ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಲಿದೆ. ಹೇಳಿಕೆ ಆಧರಿಸಿಯೂ ತನಿಖೆ ನಡೆಯುತ್ತಿದೆ. ದೂರುದಾರರ ಬಗ್ಗೆಯೂ ತನಿಖೆ ನಡೆಯುತ್ತಿದೆ. ದಾರಿ ತಪ್ಪಿಸುವ ಪ್ರಯತ್ನ ಯಾರೇ ಮಾಡಿದ್ದರೂ ತನಿಖೆಯಿಂದ ಬಯಲಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತನಿಖೆಗೆ ಎಸ್‌ಐಟಿ ಮಾಡಿದಾಗ ಧರ್ಮಸ್ಥಳದ ಧರ್ಮಾಧಿಕಾರಿಯವರು ಸ್ವಾಗತಿಸಿದ್ದರು. ಬಿಜೆಪಿ ನಾಯಕರೂ ಸ್ವಾಗತಿಸಿದ್ದರು. ಇದೀಗ ತನಿಖೆಗೆ ಧರ್ಮದ, ರಾಜಕೀಯದ ಬಣ್ಣ ಕಟ್ಟುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಮಾತಿಗಷ್ಟೇ ಹಗರಣ: ಮುಡಾ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಎಲ್ಲ ರೀತಿಯ ತನಿಖಾ ಅಸ್ತ್ರಗಳನ್ನು ಬಳಸಿದರೂ ಯಾವುದೇ ಕಾನೂನು ಬಾಹಿರ ಅಂಶಗಳು ಪತ್ತೆಯಾಗಿಲ್ಲ. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳು ಮಾತಿಗಷ್ಟೇ ಸೀಮಿತವಾಗಿವೆ ಎಂದು ಪೊನ್ನಣ್ಣ ಪ್ರತಿಕ್ರಿಯಿಸಿದರು.
ಇ.ಡಿ, ಸಿಬಿಐ ಮುಂತಾದ ಅಸ್ತ್ರಗಳನ್ನು ಬಳಸಲಾಗಿತ್ತು. ಯಾವುದರಲ್ಲಿಯೂ ಏನೂ ಸಿಗಲಿಲ್ಲ. ಕಾನೂನು ಬಾಹಿರವಾಗಿ ಏನೂ ನಡೆದಿಲ್ಲ ಎಂದು ಲೋಕಾಯುಕ್ತ ಮತ್ತು ನ್ಯಾಯಮೂರ್ತಿ ದೇಸಾಯಿ ವರದಿಯಲ್ಲಿ ತಿಳಿಸಲಾಗಿದೆ. ಸತ್ಯ ಹೊರ ಬಂದಿರುವುದರಿಂದ ಪ್ರಕರಣ ಸಮಾಪ್ತಿಗೊಂಡಿದೆ ಎಂದರು.
ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಲಿ ಎಂದು ರಾಜಕೀಯವಾಗಿ ಹೇಳಿಕೆ ನೀಡುವವರು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ, ಜಿಎಸ್‌ಟಿಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಮುಡಾ ಪ್ರಕರಣ ಮುಕ್ತಾಯ ಆಗಿರಬಹುದು. ಆದರೆ, ಸಿದ್ದರಾಮಯ್ಯರಿಗೆ ಮಾಡಿದ ಅಪಮಾನವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.